

ಮಲೇಬೆನ್ನೂರು: ಇಂದಿರಾ ಕ್ಯಾಂಟೀನ್‌ಗಾಗಿ ಜಾಗ ನೀಡುವ ಉದ್ದೇಶದಿಂದ ಮಲೆಬೆನ್ನೂರಿನ ಜಿಬಿಎಂ ಶಾಲೆ ಕೊಠಡಿಗಳನ್ನು ಕೆಡವಿದ ಸ್ಥಳಕ್ಕೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದಕ್ಕೂ ಮುನ್ನ ಪುರಸಭೆ ಸಭಾಂಗಣದಲ್ಲಿ ಚುನಾಯಿತ ಪ್ರತಿನಿಧಿಗಳು, ನಾಗರಿಕರ ಸಮ್ಮುಖದಲ್ಲಿ ಸಮಾಲೋಚನಾ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.
ಸಭೆ ವಾಗ್ವಾದದಿಂದಲೇ ಆರಂಭವಾಯಿತು. ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್ ಜನಪ್ರತಿನಿಧಿಗಳು ಹೊರತುಪಡಿಸಿ ಎಲ್ಲರೂ ಹೊರನಡೆಯುವಂತೆ ಸೂಚಿಸಿದರು. ಇದಕ್ಕೆ ಕುಪಿತರಾದ ನಾಗರಿಕರು ಸಭೆಯ ಔಚಿತ್ಯ ಪ್ರಶ್ನಿಸಿ, ಉಪವಿಭಾಗಾಧಿಕಾರಿ ಎದುರು ವಾಗ್ವಾದಕ್ಕೆ ಮುಂದಾದರು. ಆಗ ಪ ವಿಭಾಗಾಧಿಕಾರಿ ಎಲ್ಲರನ್ನೂ ಸಮಾಧಾನಪಡಿಸಿ ಅಹವಾಲು ಆಲಿಸಿದರು.
ಇಂದಿರಾ ಕ್ಯಾಂಟೀನ್ ನಿರ್ಮಿಸುವಂತೆ ನಯಾಜ್, ಗಂಗಣ್ಣ, ದಾದಾಪೀರ್, ಭಾನುವಳ್ಳಿ ಸುರೇಶ್, ಬೀರಪ್ಪ ಒತ್ತಾಯಿಸಿದರೆ, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ಹರಿಹರ ತಾಲೂಕು ಘಟಕದ ಅಧ್ಯಕ್ಷ ಬಿ. ಬಸವರಾಜ್, ಮುದೇಗೌಡ್ರ ತಿಪ್ಪೇಶ್, ಕೆ.ಜಿ. ಮಂಜುನಾಥ್, ಒ.ಜಿ. ಮಂಜುನಾಥ, ಒ.ಜಿ.ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಅಜಯ್ ನಾಯ್ಕ ಜಿಬಿಎಂ ಶಾಲೆ ಉಳಿಸುವಂತೆ ಮನವಿ ಮಾಡಿದರು.
ಜಿಲ್ಲಾ ಜೆಡಿಎಸ್ ಆಧ್ಯಕ್ಷ ಬಿ. ಚಿದಾನಂದಪ್ಪ ಮಾತನಾಡಿ, ಶಾಲಾ ಕಟ್ಟಡ ಪ್ರಥಮದರ್ಜೆ ಕಾಲೇಜಿಗೆ ಮೀಸಲಿಡಿ ಎಂದರು. ಶಾಲೆಗೆ ಜಮೀನು ನೀಡಿದ ದೇಶಪಾಂಡೆ ಮನೆತನವನ್ನು ಶ್ಲಾಘಿಸಿದರು.
ಮುಖಂಡ ಹಂಚಿನಮನೆ ಸುರೇಶ್ ಶಾಸ್ತ್ರಿ ಮಾತನಾಡಿ, 1916-1928ರ ದಾಖಲೆಗಳಂತೆ ನಿವೇಶನ ಶಾಲಾ ಶಿಕ್ಷಣಕ್ಕೆ ಮೀಸಲಿಡಲಾಗಿದೆ. ಬೇರೆ ಜಾಗದಲ್ಲಿ ಕ್ಯಾಂಟೀನ್ ನಿರ್ಮಿಸಬೇಕು. ಇದೇ ಜಾಗದಲ್ಲಿ ನಿರ್ಮಿಸಲು ಮುಂದಾದರೆ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.
ತಹಸೀಲ್ದಾರ್ ಗುರುಬಸವರಾಜ್ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್, ಕಂದಾಯಾಧಿಕಾರಿ ಪ್ರಭು, ಉಪ ತಹಸೀಲ್ದಾರ್ ಆರ್. ರವಿ, ಆರ್‌ಐ ಆನಂದ್, ವಿಎ ಅಣ್ಣಪ್ಪ, ಆರೋಗ್ಯ ನಿರೀಕ್ಷಕ ನವೀನ್, ಸಮುದಾಯ ಸಂಘಟನಾಧಿಕಾರಿ ದಿನಕರ್ ನಿಟುವಳ್ಳಿ, ನಾಗರಿಕರು, ಹಳೇ ವಿದ್ಯಾರ್ಥಿಗಳು ಇದ್ದರು.