ಸಚಿನ್​ ಪರವಾಗಿ ನಿಮ್ಮನ್ನು ನಿಂದಿಸಿದೆವು ಕ್ಷಮೆ ಇರಲಿ ಮರಿಯಾ: 2015ರ ಘಟನೆಗೆ ಕೇರಳಿಗರ ಕ್ಷಮೆ!

Maria
Published on

ತಿರುವನಂತಪುರಂ: ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ವಿಚಾರವಾಗಿ 2015ರ ಜನವರಿಯಲ್ಲಿ ಟೆನ್ನಿಸ್​ ತಾರೆ ಮರಿಯಾ ಶರಪೋವಾ ನೀಡಿದ್ದ ಹೇಳಿಕೆಗೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿ, ನಿಂದಿಸಿದ್ದರು. ಅದರಲ್ಲೂ ವಿಶೇಷವಾಗಿ ಬಹುತೇಕ ಕೇರಳಿಗರೇ ಶರಪೋವಾರನ್ನು ಟಾರ್ಗೆಟ್​ ಮಾಡಿದ್ದರು. ಇದೀಗ ಅದೇ ನೆಟ್ಟಿಗರು ಶರಪೋವಾರ ಫೇಸ್​ಬುಕ್​ ಖಾತೆಗೆ ತೆರಳಿ ಕ್ಷಮೆಯಾಚಿಸುತ್ತಿದ್ದಾರೆ.

ಕ್ರಿಕೆಟ್​ ಲೆಜೆಂಡ್​ ಸಚಿನ್​ ತೆಂಡೂಲ್ಕರ್​ ಯಾರೆಂದು ನನಗೆ ತಿಳಿದಿಲ್ಲ ಎಂದು 2015ರಲ್ಲಿ ಮರಿಯಾ ಹೇಳಿದ್ದರು. ಇದರ ಬೆನ್ನಲ್ಲೇ ಆಕೆಯ ಮೇಲೆ ಮುಗಿಬಿದ್ದ ನೆಟ್ಟಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ಈ ಘಟನೆ ಆರು ವರ್ಷಗಳ ಹಿಂದೆ ನಡೆದಿತ್ತು. ಇದೀಗ ಅದೇ ವಿಚಾರ ಮತ್ತೊಮ್ಮೆ ಪ್ರಚಲಿತಕ್ಕೆ ಬಂದಿದೆ. ಅದಕ್ಕೂ ಸಚಿನ್​ ಅವರೇ ಕಾರಣರಾಗಿದ್ದಾರೆ.

ಪಾಪ್​ ಗಾಯಕಿ ರಹಾನ ಟ್ವೀಟ್​ ಬಳಿ ರೈತರ ಪ್ರತಿಭಟನೆ ಅಂತಾರಾಷ್ಟ್ರಿಯ ಗಮನಸೆಳೆದಿದ್ದು, ದೆಹಲಿಯ ಕೆಲವು ಭಾಗದಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿರುವುದಕ್ಕೆ ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿರುವ ನಡುವೆಯೇ ಬುಧವಾರ ಟ್ವೀಟ್​ ಮಾಡಿದ್ದ ಸಚಿನ್​, ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಲಾಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವವರಲ್ಲ. ಭಾರತೀಯರಿಗೆ ಭಾರತ ತಿಳಿದಿದೆ ಮತ್ತು ಭಾರತ ಬಗ್ಗೆ ಅವರೇ ನಿರ್ಧರಿಸುತ್ತಾರೆ. ರಾಷ್ಟ್ರದ ಒಗ್ಗಟ್ಟಾಗಿ ಉಳಿದುಕೊಳ್ಳೋಣ ಎಂದು ಕೇಂದ್ರ ಸರ್ಕಾರ ನೀಡಿದ್ದ #IndiaTogether ಮತ್ತು #IndiaAgainstPropaganda ಎಂಬ ಹ್ಯಾಷ್​ಟ್ಯಾಗ್​ ಹಾಕಿ ಬರೆದುಕೊಂಡಿದ್ದರು.

ಇದೀಗ ಮರಿಯಾ ಶರಫೋವಾ ಫೇಸ್​ಬುಕ್​ ಪೇಜ್​ ಹುಡುಕಿಕೊಂಡು ಹೋಗಿರುವ ಕೇರಳದ ನೆಟ್ಟಿಗರು, ಆಕೆಗೆ ಕ್ಷಮೆಯಾಚಿಸಿ ಸಾಲು ಸಾಲು ಟ್ವೀಟ್​ ಮಾಡುತ್ತಿದ್ದಾರೆ. ಪ್ರೀತಿಯ ಮರಿಯಾ, ಸಚಿನ್​ ಹೆಸರಿನಲ್ಲಿ ನಿಮ್ಮ ಮೇಲೆ ನಾವು ಮಾಡಿದ ಸೈಬರ್​ ದಾಳಿಗೆ ಕ್ಷಮೆ ಇರಲಿ ಎಂದು ನೆಟ್ಟಿಗನೊಬ್ಬರ ಕಮೆಂಟಿಸಿದ್ದಾರೆ.

ಅಂದು ಪಕ್ವತೆ ಇಲ್ಲದೆ ನಾನು ಕೆಲವೊಂದು ಕಾಮೆಂಟ್​ಗಳನ್ನು ಸಚಿನ್​ ಪರವಾಗಿ ಮಾಡಿ ನಿಮ್ಮನ್ನು ನಿಂದಿಸಿದೆ. ನನ್ನ ಕ್ಷಮಿಸಿ ಮರಿಯಾ ಎಂದು ಮತ್ತೊಬ್ಬ ನೆಟ್ಟಿಗ ಟ್ವಿಟಿಸಿದ್ದಾರೆ. ಸಚಿನ್​ ಗೊತ್ತಿಲ್ಲ ಎಂದು ನಾವೆಲ್ಲ ನಿಮ್ಮನ್ನು ನಿಂದಿಸಿದೆವು. ಸಚಿನ್​ರನ್ನು ತಿಳಿಯದಿರುವುದೇ ಉತ್ತಮ ಎಂದು ಇನ್ನೋರ್ವ ನೆಟ್ಟಿಗ ಹೇಳಿದ್ದಾನೆ. ಹೀಗೆ ಅನೇಕ ಮಂದಿ ಶರಪೋವಾರ ಬಳಿ ಕ್ಷಮೆಯಾಚಿಸಿ ರೈತರ ಪ್ರತಿಭಟನೆಗೆ ನಿಲ್ಲಲಿಲ್ಲ ಎಂದು ಆರೋಪಿಸಿ ಸಚಿನ್​ ನಡೆಯನ್ನು ಖಂಡಿಸಿದ್ದಾರೆ.

ಕೊನೆಯಲ್ಲಿ ನೆಟ್ಟಿಗನೊಬ್ಬ ವಯನಾಡಿಗೆ ಪ್ರವಾಸ ಮಾಡುವಂತೆ ಕೇಳಿಕೊಂಡಿದ್ದು, ಮೋಜಿನ ವಾಸ್ತವ್ಯಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net