

Actor Dileep Shankar: ಮಲಯಾಳಂ ಕಲಾವಿದ ದಿಲೀಪ್ ಶಂಕರ್ ಭಾನುವಾರ (ಡಿ.29) ತಿರುವನಂತಪುರಂನ ಖಾಸಗಿ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ನಟನ ಸಾವಿಗೆ ಕಾರಣವೇನು ಎಂಬುದು ಯಾರಿಗೂ ತಿಳಿದಿಲ್ಲ. ಈ ಬಗ್ಗೆ ಯಾವುದೇ ಮಾಹಿತಿ ಕೂಡ ಸದ್ಯದ ಮಟ್ಟಿಗೆ ಲಭ್ಯವಾಗಿಲ್ಲ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಇಲ್ಲಿಯವರೆಗೆ ಯಾವ ಮಾಹಿತಿಯನ್ನು ಸಹ ಬಹಿರಂಗಪಡಿಸಿಲ್ಲ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ದಿಲೀಪ್ ಡಿಸೆಂಬರ್ 19ರಂದು ಹೋಟೆಲ್‌ಗೆ ಚೆಕ್ ಇನ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ದಿಲೀಪ್ ಶಂಕರ್ ಹೋಟೆಲ್‌ನಲ್ಲಿ ತಂಗಿದ್ದಾಗ ಒಮ್ಮೆಯೂ ತಮ್ಮ ಕೊಠಡಿಯಿಂದ ಹೊರಬಂದಿಲ್ಲ ಎನ್ನಲಾಗಿದೆ. ಅವರ ಸಹ ನಟರು, ಸ್ನೇಹಿತರು ದಿಲೀಪ್ ಅವರಿಗೆ ದೂರವಾಣಿ ಕರೆ ಮಾಡಿ, ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದ್ರೆ, ಅವರು ಯಾರ ಕರೆಯನ್ನು ಸ್ವೀಕರಿಸಿಲ್ಲ. ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಅವರು ಉಳಿದಿದ್ದ ಹೋಟೆಲ್ ಕೊಠಡಿಯ ಡೋರ್ ಅನ್ನು ಬಲವಂತವಾಗಿ ತೆರೆದು ನೋಡಿದಾಗ ಅಲ್ಲಿ ದಿಲೀಪ್ ಶವವಾಗಿ ಪತ್ತೆಯಾಗಿರುವುದು ಕಂಡುಬಂದಿದೆ.
ಪಂಚಾಗ್ನಿ ಧಾರವಾಹಿಯ ಚಿತ್ರೀಕರಣಕ್ಕಾಗಿ ದಿಲೀಪ್ ಶಂಕರ್ ತಿರುವನಂತಪುರಂನಲ್ಲಿದ್ದರು ಎಂದು ವರದಿಗಳು ಹೇಳಿವೆ. ದಿಲೀಪ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕಾರ್ಯಕ್ರಮದ ನಿರ್ದೇಶಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯೊಂದು ಉಲ್ಲೇಖಿಸಿದೆ. ಅನಾರೋಗ್ಯದ ಸ್ವರೂಪ ತಿಳಿದಿಲ್ಲವಾದರೂ, ದಿಲೀಪ್ ತಮ್ಮ ಅನಾರೋಗ್ಯದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ಹೇಳಿಕೆಗಳು ದಾಖಲಾಗಿವೆ. ಸದ್ಯ ದಿಲೀಪ್ ಸಾವಿಗೆ ಕಾರಣವೇನು ಎಂಬುದು ಮೇಲ್ನೋಟಕ್ಕೆ ತಿಳಿಯದ ಹಿನ್ನಲೆ ಇದೀಗ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.