

ಮಳವಳ್ಳಿ : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ರೈತ ಸಮುದಾಯಕ್ಕೆ ಮಾಜಿ ಸಚಿವ ಕೆ.ಎನ್. ನಾಗೇಗೌಡ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಜಿ.ಟಿ ದೇವೇಗೌಡ ಸ್ಮರಿಸಿದರು. ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ಶಾಂತಿ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿ. ಕೆ.ಎನ್ ನಾಗೇಗೌಡರ 21ನೇ ವರ್ಷದ ಪುಣ್ಯಸ್ಮರಣೆ ಹಾಗೂ ಸಮಾಜಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ಹೆಬ್ಬಯಕೆಯೊಂದಿಗೆ ನಾಗೇಗೌಡ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಪ್ರಾಥಮಿಕ ಶಾಲೆಯಿಂದ ಪದವಿವರೆಗೆ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿ ಕೊಟ್ಟರು. ಇದು ಅವರ ಸೇವಾ ಮನೋಭಾವಕ್ಕೆ ಹಿಡಿದ ಕನ್ನಡಿ ಎಂದು ದೇವೇಗೌಡ ಹೇಳಿದರು.
ಅಂದು ಯಾರಿಗೂ ಬೇಡವಾಗಿದ್ದ ಪಶುಸಂಗೋಪನಾ ಇಲಾಖೆ ಸಚಿವ ಸ್ಥಾನ ಪಡೆದ ನಾಗೇಗೌಡ, ಹೈನುಗಾರಿಕೆಯಿಂದ ಹೆಚ್ಚು ಆದಾಯ ಪಡೆಯಬಹುದು ಎಂದು ಕೃಷಿಕರಿಗೆ ಮನವರಿಕೆ ಮಾಡಿಸುವಲ್ಲಿ ಯಶವಾಗಿದ್ದರು. ನಂತರದ ವರ್ಷದಲ್ಲಿ ಭಾರಿ ನೀರಾವರಿ ಸಚಿವರಾಗಿ ಮಂಡ್ಯ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ನಾಲಾ ಆಧುನೀಕರಣ ಕಾಮಗಾರಿ ನಡೆಸಿ ರೈತರಿಗೆ ಉಪಕರಿಸಿದರು ಎಂದರು. ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಎಂ.ಕೆ ನಾಗಮಣಿ ನಾಗೇಗೌಡ ಮಾತನಾಡಿ, ನಾಗೇಗೌಡರ ಆಶಯಗಳನ್ನು ಈಡೇರಿಸಲು ಶಿಕ್ಷಣ ಸಂಸ್ಥೆ ನಿರಂತರ ಶ್ರಮಿಸುತ್ತಿದೆ ಎಂದರು.
ಪ್ರಶಸ್ತಿ ಪ್ರದಾನ: ಹೈನುಗಾರಿಕೆಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ಕೃಷಿಕ ತಂಡಸನಹಳ್ಳಿ ಸಂಜಯ್ ಅವರಿಗೆ ಸಮಾಜಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ. ಪೂ. ಕಾಲೇಜು ಹಾಗೂ ಪ್ರೌಢಶಾಲಾ ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ನಾಗೇಗೌಡರ ಪುಣ್ಯಸ್ಮರಣೆ ಅಂಗವಾಗಿ ರೈತರೊಬ್ಬರಿಗೆ ಹಸು ವಿತರಿಸಲಾಯಿತು.
ಪ್ರಾಂಶುಪಾಲರಾದ ವೇದಮೂರ್ತಿ, ಸಿ.ಅನಿತಾ, ಶಿಕ್ಷಣ ಸಂಸ್ಥೆ ಪದಾಧಿಕಾರಿಗಳಾದ ಮಹದೇವಸ್ವಾಮಿ, ಎಂ.ಎಚ್ ಕೆಂಪಯ್ಯ, ತಿಮ್ಮೇಗೌಡ, ಪುಟ್ಟರಾಜು, ಅರ್ಜುನ ಗೌಡ, ಮುಖಂಡರಾದ ಚಿನ್ನಾಳು ಪ್ರಕಾಶ್, ರಮೇಶ್, ಮಾರ್ಕಾಂಡೇಯ, ಚಿಕ್ಕರಾಜು, ಅಪ್ಪಾಜಿ ಗೌಡ, ಪ್ರಶಾಂತ ಕುಮಾರ್, ಸೇರಿದಂತೆ ಇತರರು ಇದ್ದರು.