ಮಲೇರಿಯಾ ನಿರ್ಮೂಲನೆಗೆ ಸ್ವಚ್ಛತೆಗೆ ಆದ್ಯತೆ ನೀಡಿ; ಡಾ. ಸರಿತಾ

9-RNR-06
Published on

ಹಾವೇರಿ: ಮಲೇರಿಯಾ ನಿರ್ಮೂಲನೆಗೆ ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಸೊಳ್ಳೆ ಪರದೆ ಬಳಸಬೇಕು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆರೋಗ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಜಿಲ್ಲಾ ರೋಗವಾಹಕ ರೋಗಗಳ ನಿಯಂತ್ರಾಧಿಕಾರಿ ಡಾ. ಸರಿತಾ ಹೇಳಿದರು.
ನಗರದ ಹೊಸಮಠದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಮಲೇರಿಯಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಇಲಾಖೆಯಲ್ಲಿ 2025ಕ್ಕೆ ಮಲೇರಿಯಾ ನಿರ್ಮೂಲನೆ ಗುರಿಹಾಕಿಕೊಳ್ಳಲಾಗಿದೆ. ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಎಲ್ಲರೂ ಜಾಗೃತರಾಗಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯವನ್ನು ನೇರವಾಗಿ ಚರಂಡಿಗೆ ಹಾಕದೆ ಕಸದ ವಾಹನಗಳಿಗೆ ಹಾಕಬೇಕು. ರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಹಾಗಾಗಿ ಎಲ್ಲರೂ ಸ್ವಚ್ಛತೆಗೆ ಕೈಜೋಡಿಸಬೇಕು ಎಂದರು.
ಮಲೇರಿಯಾ ರೋಗ ಅನಾಫಿಲಿಸ್ ಸೊಳ್ಳೆ ಕಚ್ಚುವುದರಿಂದ ಬಾದಿಸುತ್ತದೆ. ಮಲೇರಿಯಾ, ಡೆಂಘಿ, ಚಿಕನ್‌ಗುಣ್ಯಾ, ಮೆದುಳು ಜ್ವರ ಹಾಗೂ ಆನೆಕಾಲು ರೋಗ ಸೊಳ್ಳೆ ಕಚ್ಚುವುದರಿಂದ ಬರುತ್ತವೆ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆಯುವುದರಿಂದ ಮುಂದೆ ಆಗುವ ಅನಾಹುತಗಳನ್ನು ತಡೆಯಬಹುದು. ಸಾಮಾನ್ಯ ಜ್ವರಕ್ಕೂ ರಕ್ತ ಪರೀಕ್ಷೆ ಮಾಡಿಸಿ ತ್ವರಿತವಾಗಿ ಚಿಕಿತ್ಸೆ ಪಡೆಯಿರಿ. ರೋಗವನ್ನು ನಿಯಂತ್ರಿಸಲು ಸೊಳ್ಳೆ ಪರದೆ ಮತ್ತು ಸೊಳ್ಳೆ ನಿವಾರಕಗಳನ್ನು ಬಳಕೆಮಾಡಬೇಕು ಎಂದು ಸಲಹೆ ನೀಡಿದರು.
ಕಾಲೇಜ್‌ನ ಪ್ರಾಂಶುಪಾಲ ಮಂಜುನಾಥ ವಡ್ಡರ ಅಧ್ಯಕ್ಷತೆ ವಹಿಸಿದ್ದರು.
ಕೀಟಶಾಸ್ತ್ರಜ್ಞ ಶ್ರೀಕಾಂತ ಪಾಟೀಲ ಮಲೇರಿಯಾ ಹಾಗೂ ಸಾಂಕ್ರಮಿಕ ರೋಗಗಳ ಕುರಿತು ಉಪನ್ಯಾಸ ನೀಡಿದರು. ರಾಷ್ಟ್ರೀಯ ಹವಾಮಾನ ವೈಪರುತ್ಯ ಹಾಗೂ ಮಾನವ ಆರೋಗ್ಯ ಕುರಿತು ಸೂರ್ಯಾಘಾತ ನಿರ್ವಹಣೆ ಪ್ರಚಾರ ಸಾಮಗ್ರಿ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಶಿಗ್ಗಾಂವಿ ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ, ಆರೋಗ್ಯ ಇಲಾಖೆ ಅಧಿಕಾರಿಗಳಾದ ಚನ್ನಪ್ಪ ಲಮಾಣಿ, ಮಾಲಿನಿ ಮರಾಂಡೆ, ಎ.ಬಿ. ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಕ ಜಗದೀಶ, ಕಿರಿಯ ಆರೋಗ್ಯ ನಿರೀಕ್ಷಕ ಮಲ್ಲಿಕಾರ್ಜುನ ಎಂ. ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net