ಮಲೇರಿಯಾ ಕಾಯಿಲೆ ನಿರ್ಲಕ್ಷ್ಯ ಸಲ್ಲ

World Malaria Day
ಶಿವಮೊಗ್ಗದಲ್ಲಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜಿನಲ್ಲಿ ವಿಶ್ವ ಮಲೇರಿಯಾ ದಿನವನ್ನು ಡಿಎಚ್‌ಒ ಡಾ. ನಟರಾಜ್ ಉದ್ಘಾಟಿಸಿದರು. ಡಾ. ಗುಡದಪ್ಪ ಕಸಬಿ, ಡಾ. ನಾಗರಾಜ ನಾಯ್ಕ್, ಡಾ. ಮಲ್ಲಪ್ಪ, ಡಾ. ಚಂದ್ರಶೇಖರ್, ಡಾ. ಧನಂಜಯ್, ನಾರಾಯಣ, ಸತೀಶ್ ಚಂದ್ರ, ಜಿ.ವಿಜಯಕುಮಾರ್, ಪ್ರೊ. ಮಮತಾ, ಕೆ.ಎಂ.ನಾಗರಾಜ, ಪ್ರೊ. ಜಗದೀಶ್ ಇದ್ದರು.
Published on

ಶಿವಮೊಗ್ಗ: ಮೊಬೈಲ್ ಮೂಲಕ ಪ್ರತಿಯೊಂದನ್ನೂ ಕ್ಷಣದಲ್ಲಿ ತಿಳಿದುಕೊಳ್ಳುವ ಸೌಲಭ್ಯ ಇರುವುದರಿಂದ ಜನರಿಗೆ ಕಾಯಿಲೆ ಬಗ್ಗೆ ಭಯ ಇಲ್ಲದಂತಾಗಿದೆ. ಆದರೆ ಕಾಯಿಲೆಗಳ ಪ್ರಮಾಣ ಕಡಿಮೆಯಾಗಿದೆ ಎಂಬ ನಿರ್ಲಕ್ಷ್ಯ ಸಲ್ಲದು. ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಡಿಎಚ್‌ಒ ಡಾ. ನಟರಾಜ್ ಸಲಹೆ ನೀಡಿದರು.

ನಗರದ ಎಟಿಎನ್‌ಸಿ ಸಂಜೆ ಕಾಲೇಜಿನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಿಂದ ವಿಶ್ವ ಮಲೇರಿಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾಯಿಲೆಗಳನ್ನು ಇಂದಿನ ಪೀಳಿಗೆ ಸಾಕಷ್ಟು ನಿರ್ಲಕ್ಷಿಸುತ್ತಿದ್ದಾರೆ. ಮಲೇರಿಯಾ ಕಡಿಮೆಯಾಗಿದೆ ಎಂದು ಅಸಡ್ಡೆ ಮಾಡಬಾರದು. ಈ ಕಾರ್ಯಕ್ರಮಗಳ ಮೂಲಕ ಮಾಹಿತಿ ಪಡೆದು ವಿದ್ಯಾರ್ಥಿಗಳು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಜನರಿಗೆ ಕಾಯಿಲೆ ಕುರಿತು ಅರಿವು ಮೂಡಿಸಿ ಅದನ್ನು ತಡೆಗಟ್ಟಲು ಮುಂದಾಗಬೇಕು ಎಂದು ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಮಾತನಾಡಿ, ಮಲೇರಿಯಾ ಕಾಯಿಲೆ ಪುರಾತನ ಕಾಲದಿಂದಲೂ ಎಡೆಬಿಡದೆ ಕಾಡಿಸುತ್ತಿದೆ. ಇಂದಿಗೂ ಪ್ರತಿ ವರ್ಷ ಮಲೇರಿಯಾದಿಂದ 20 ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗುತ್ತಿದ್ದಾರೆ. ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಬರುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಸುಳಿಯದಂತೆ ಎಚ್ಚರ ವಹಿಸಬೇಕು. 2005ರ ರಾಷ್ಟ್ರೀಯ ಕೀಟಜನ್ಯ ನಿಯಂತ್ರಣ ಕಾರ್ಯಕ್ರಮದ ಮೂಲಕ ಮಾಹಿತಿ ಪಡೆದುಕೊಳ್ಳಬಹುದು ಎಂದರು.
ಜಿಲ್ಲಾ ಆರ್‌ಸಿಎಚ್‌ಒ ಡಾ. ನಾಗರಾಜ ನಾಯ್ಕ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಲ್ಲಪ್ಪ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಆರೋಗ್ಯ ಇಲಾಖೆಯ ಡಾ. ಧನಂಜಯ್, ನಾರಾಯಣ, ರೋಟರಿ ಸಂಸ್ಥೆ ಅಧ್ಯಕ್ಷ ಸತೀಶ್ ಚಂದ್ರ, ರೋಟರಿ ಮಾಜಿ ಅಸಿಸ್ಟೆಂಟ್ ಗೌರ್ನರ್ ಜಿ.ವಿಜಯಕುಮಾರ್, ಕಾಲೇಜಿನ ಪ್ರಾಚಾರ್ಯೆ ಪ್ರೊ. ಮಮತಾ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಕೆ.ಎಂ.ನಾಗರಾಜ, ಪ್ರೊ. ಜಗದೀಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net