

ನವದೆಹಲಿ: ಚೀನಾ ಮತ್ತು ಪಾಕ್ ಗಡಿ ಭಾಗದಲ್ಲಿ ಗಡಿ ಸಂಘರ್ಷ ಮುಂದುವರಿದಿರುವಂತೆಯೇ ಈ ಸಾಲಿನ ಮಲಬಾರ್ ನೌಕಾಪಡೆ ಸಮರಾಭ್ಯಾಸ ಇಂದಿನಿಂದ ಆರನೇ ತಾರೀಕುವರೆಗೆ ವಿಶಾಖಪಟ್ಟಣಂ ಸಮೀಪ ಬಂಗಾಳ ಕೊಲ್ಲಿಯಲ್ಲಿ ಶುರುವಾಗಿದೆ. ಚತುಷ್ಪಕ್ಷೀಯ ಮೈತ್ರಿಕೂಟ (ಕ್ವಾಡ್)ದ ನಾಲ್ಕು ಸದಸ್ಯ ರಾಷ್ಟ್ರಗಳಾದ ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾಗಳು ಇದೇ ಮೊದಲ ಬಾರಿಗೆ ಭಾಗಿಯಾಗುತ್ತಿವೆ. ಭಾರತದ ಜತೆ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯಾ ಭಾಗಿಯಾಗುತ್ತಿರುವುದು ಮಹತ್ವದ ಬೆಳವಣಿಗೆಯಾಗಿದೆ.
1992 ಮೊದಲ ಬಾರಿ ಅಮೆರಿಕ ಮತ್ತು ಭಾರತದ ಮಧ್ಯೆ ದ್ವಿಪಕ್ಷೀಯ ಸಮರಾಭ್ಯಾಸ ನಡೆಯಿತು. 1997ರ ವರೆಗೆ ಮೂರು ಬಾರಿ ಸಮರಾಭ್ಯಾಸ ನಡೆಸಲಾಯಿತು.
2007 ಜಪಾನ್, ಸಿಂಗಾಪುರ ಮತ್ತು ಆಸ್ಟ್ರೇಲಿಯಾದ ನೌಕಾಪಡೆಗಳು ಮೊದಲ ಬಾರಿಗೆ ಮಲಬಾರ್ ಸಮರಾಭ್ಯಾಸದಲ್ಲಿ ಭಾಗಿಯಾಗಿದ್ದವು.
2015 ಜಪಾನ್ ಮಲಬಾರ್ ಸಮರಾಭ್ಯಾಸದ ಖಾಯಂ ಸದಸ್ಯ ರಾಷ್ಟ್ರವಾಯಿತು.
2018 ಫಿಲಿಪ್ಪೀನ್ ಸಮುದ್ರದಲ್ಲಿನ ಗುವಾಮ್ ತೀರದಲ್ಲಿ ಸಮರಾಭ್ಯಾಸ
2019 ಜಪಾನ್ ಕರಾವಳಿಯಲ್ಲಿ ಸಮರಾಭ್ಯಾಸ
ಸಾಗರ ಭದ್ರತೆ ಕ್ಷೇತ್ರದಲ್ಲಿ ಇತರ ದೇಶಗಳೊಂದಿಗೆ ಸಹಕಾರ ವೃದ್ಧಿಸುವುದು ಭಾರತದ ಉದ್ದೇಶ. ಕ್ವಾಡ್ನ ಈ ವಾರ್ಷಿಕ ಸಮರ ಕವಾಯತು, ಇಂಡೋ-ಪೆಸಿಫಿಕ್ ವಲಯದಲ್ಲಿ ತನ್ನ ಪ್ರಭಾವವನ್ನು ನಿಯಂತ್ರಿಸುವ ಹುನ್ನಾರ ಎಂಬುದು ಚೀನಾ ಆತಂಕವಾಗಿದೆ. ಅರಬ್ಬಿ ಸಮುದ್ರದಲ್ಲಿ ಎರಡನೇ ಹಂತದ ಸಮರಾಭ್ಯಾಸ ನವೆಂಬರ್ 17ರಿಂದ 20ರವರೆಗೆ ನಡೆಯಲಿದೆ. ಮಲಬಾರ್ ಸಮರಾಭ್ಯಾಸದ ನೇತೃತ್ವವನ್ನು ಈಸ್ಟರ್ನ್ ಪ್ಲೀಟ್ ಕಮಾಂಡಿಂಗ್ ಫ್ಯ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಸಂಜಯ್ ವಹಿಸಲಿದ್ದಾರೆ.
ಯಾಕಿಷ್ಟು ಮಹತ್ವ?: ಚೀನಾದ ಪ್ರಭಾವಕ್ಕೆ ಇಂಡೋ-ಪೆಸಿಫಿಕ್ ಭಾಗದಲ್ಲಿ ಹೆಚ್ಚುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಸಲುವಾಗಿ ಇದೇ ಮೊದಲ ಬಾರಿ ಕ್ವಾಡ್ನ ನಾಲ್ಕೂ ಸದಸ್ಯ ರಾಷ್ಟ್ರಗಳು ಒಗ್ಗಟ್ಟು ಪ್ರದರ್ಶಿಸಿವೆ. ಭಾರತ, ಆಸ್ಟ್ರೇಲಿಯಾ ಹಾಗೂ ಅಮೆರಿಕ ಜತೆ ಚೀನಾದ ಸಂಬಂಧ ಇತ್ತೀಚೆಗೆ ಹದಗೆಟ್ಟಿರುವುದು ಹಾಗೂ ಈ ಭಾಗದಲ್ಲಿ ಭಾರತದ ಬಲ ಹೆಚ್ಚಳಕ್ಕೆ ಅಮೆರಿಕ ಬಹಿರಂಗವಾಗಿಯೇ ಬೆಂಬಲ ನೀಡುತ್ತಿರುವುದು ಗಮನಾರ್ಹ.
ಚೀನಾ ಆಕ್ರೋಶ : ಬಂಗಾಳಕೊಲ್ಲಿಯಲ್ಲಿ 2007ರಲ್ಲಿ ನಡೆದ ಭಾರತ-ಅಮೆರಿಕ ಮಲಬಾರ್ ಸಮರಾಭ್ಯಾಸವನ್ನು ಚೀನಾ ತೀವ್ರವಾಗಿ ಖಂಡಿಸಿತ್ತು. ಬಳಿಕ 2015ರಲ್ಲಿ ಜಪಾನ್ ಕೂಡ ಈ ಗುಂಪಿಗೆ ಸೇರ್ಪಡೆಗೊಂಡ ಕಾರಣ ಚೀನಾದ ಆಕ್ರೋಶ ಹೆಚ್ಚಾಗಿತ್ತು. ಈಗ ಆಸ್ಟ್ರೇಲಿಯಾ ಕೂಡ ಇದರಲ್ಲಿ ಪಾಲ್ಗೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಚೀನಾ, ಮಿಲಿಟರಿ ಸಹಕಾರವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅನುಕೂಲಕರವಾಗಿರಬೇಕು ಎಂದು ಪ್ರತಿಪಾದಿಸತೊಡಗಿದೆ. (ಏಜೆನ್ಸೀಸ್)