

ಬೀಜಿಂಗ್: ಕರೊನಾದ ಬಗ್ಗೆ ಅಧ್ಯಯನಗಳು ನಡೆಯುತ್ತಿರುವ ಬೆನ್ನಲ್ಲೇ ಆಘಾತಕಾರಿ ಸುದ್ದಿಗಳೂ ಹೊರಬರುತ್ತಿವೆ. ಇದೀಗ ಅಂಥದ್ದೇ ಇನ್ನೊಂದು ಸುದ್ದಿಯನ್ನು ಚೀನಾದ ಯಾಂಗಝೌ ವಿಶ್ವವಿದ್ಯಾಲಯದ ಸಂಶೋಧಕರು ನೀಡಿದ್ದಾರೆ.
ಅದೇನೆಂದರೆ ಮಲದಲ್ಲಿ ಕರೊನಾ ಸೋಂಕು ಇರುವ ಬಗ್ಗೆ ಇದಾಗಲೇ ಸಾಬೀತಾಗಿದೆ. ಹಲವರ ದೇಹದಲ್ಲಿ ಕರೊನಾ ಸೋಂಕು ಹೊಕ್ಕಿದ್ದರೂ ಅನಾರೋಗ್ಯದ ಯಾವುದೇ ಲಕ್ಷಣಗಳೂ ಇರದ ಕಾರಣ, ಸೋಂಕು ತಗುಲಿರುವುದೇ ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ, ಮನೆಯಲ್ಲಿ ಫ್ಲಷಿಂಗ್ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು ಎಂದು ಈ ಅಧ್ಯಯನ ತಂಡ ಹೇಳಿದೆ.
ಸಂಶೋಧಕರು ಹೇಳಿರುವ ಪ್ರಕಾರ, ಟಾಯ್ಲೆಟ್‌ನಲ್ಲಿ ಫ್ಲಷ್ ಮಾಡುವ ಮುನ್ನ ಕಮೋಡ್‌ನ ಬಾಗಿಲು ಮುಚ್ಚಬೇಕು. ವೈರಸ್ ನಮ್ಮ ಜೀರ್ಣಾಂಗವ್ಯೂಹದಲ್ಲಿ ಜೀವಿಸಿರುವ ಸಾಧ್ಯತೆ ಇರುವ ಕಾರಣ, ಅದು ಸೋಂಕಿತರ ಮಲದಿಂದ ಬೇರೆಯವರಿಗೆ ಹರಡುವ ಸಾಧ್ಯತೆ ಇರುವ ಕಾರಣ ಈ ಕಾಳಜಿ ವಹಿಸುವುದು ಅತ್ಯಗತ್ಯ ಎಂದು ಸಂಶೋಧಕರು ಹೇಳಿದ್ದಾರೆ.
ಈ ಅಧ್ಯಯನ ವರದಿಯನ್ನು ಫಿಸಿಕ್ಸ್ ಆಫ್ ಫ್ಯುಯೆಡ್ಸ ಎನ್ನುವ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನೆಗೆ 'ಟಾಯ್ಲೆಟ್ ಪ್ಲೂಮ್ ಏರೋಸಲ್' ಎಂದು ಕರೆಯಲಾಗಿದೆ.
ಮಲದಲ್ಲಿ ಅಡಗಿರುವ ಚಿಕ್ಕ ಚಿಕ್ಕ ಪ್ರಮಾಣದ ಸೂಕ್ಷ್ಮ ಕಣಗಳು ಬಾತ್ರೂಂ ಸೇರಿಕೊಳ್ಳುತ್ತವೆ. ಅದು ಅಲ್ಲಿಯ ನೆಲೆಸುವ ಕಾರಣ, ಶೌಚಾಲಯಕ್ಕೆ ಬಂದ ಬೇರೊಬ್ಬರಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಮಲವಿಸರ್ಜನೆ ಬಳಿಕ ಕಮೋಡ್‌ನ ಬಾಗಿಲು ಮುಚ್ಚಿ ಎಂದು ಎಚ್ಚರಿಕೆ ನೀಡಲಾಗಿದೆ.ಅದೇ ವೇಳೆ ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದನ್ನು ಕಡಿಮೆ ಮಾಡಿ ಎಂದಿದ್ದಾರೆ.
ಈ ವರದಿಯನ್ನು ಅಮೆರಿಕದ ಮೈಕ್ರೋ ಬಯಲಾಜಿಸ್ಟ್ ಚಾರ್ಲ್ಸ್ ಪಿ. ಗೆಬ್ರಾ ನಿರಾಕರಿಸಿದ್ದಾರೆ. ಆದರೆ, ಮಲದಿಂದ ಸೋಂಕು ಹರಡುವ ಬಗ್ಗೆ ಇದಾಗಲೇ ಹಲವಾರು ಕಡೆಗಳಲ್ಲಿ ಸಾಬೀತಾಗಿರುವ ಕಾರಣ, ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಒಳಿತು. (ಏಜೆನ್ಸೀಸ್)