

ರಾಮನಗರ : ಕಳೆದ ಹಲವು ತಿಂಗಳಿನಿಂದಲೂ ತೂಗುಯ್ಯಲೆಯಲ್ಲಿದ್ದ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರುತ್ತಿದ್ದಂತೆ ಮಕ್ಕಳನ್ನು ಸ್ವಾಗತಿಸಲು ಶಾಲೆಗಳು ಸಿದ್ಧತೆ ಆರಂಭಿಸಿವೆೆ.
ಕರೊನಾದಿಂದಾಗಿ ಎರಡು ವರ್ಷಗಳಿಂದಲೂ ಶಾಲಾ-ಕಾಲೇಜುಗಳು ಬಂದ್ ಆಗಿ, ಮಕ್ಕಳ ಶೈಕ್ಷಣಿಕ ಭವಿಷ್ಯ ಕಮರಿ ಹೋಗುವ ಆತಂಕ ಎದುರಾಗಿತ್ತು. ಆದರೆ ಹಂತ-ಹಂತವಾಗಿ ಕಾಲೇಜು ಆರಂಭಗೊಂಡು, 6-10ನೇ ತರಗತಿಗಳ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದಂತೆ ದೃಢ ನಿರ್ಧಾರ ಮಾಡಿದ ಸರ್ಕಾರ ಇದೀಗ 1-5ನೇ ತರಗತಿಗಳನ್ನು ನಾಳೆಯಿಂದ (ಸೋಮವಾರ) ಆರಂಭಿಸಲು ೋಷಣೆ ಮಾಡಿದೆ.ಇದರೊಂದಿಗೆ ಕರೊನಾ ಕಾರಣದಿಂದಾಗಿ
ಆನ್‌ಲೈನ್ ಮೂಲಕವೇ ಶಿಕ್ಷಣ ಪಡೆದು, ದೈಹಿಕ ಚಟುವಟಿಕೆಯಿಂದ ದೂರವಾಗಿದ್ದ ಸಣ್ಣ ಮಕ್ಕಳು ಸೋಮವಾರದಿಂದ ಶಾಲೆಗಳಿಗೆ ಆಗಮಿಸಲಿದ್ದಾರೆ.
ಸರ್ಕಾರಕ್ಕೆ ಪ್ರೇರಣೆ?: 6-10ನೇ ತರಗತಿಗಳ ನೇರ ತರಗತಿ ಆರಂಭಕ್ಕೆ ಚಾಲನೆ ನೀಡಿದ ನಂತರ ಕರೊನಾ ಆಘಾತ ಎದುರಾಗಬಹುದು ಎನ್ನುವ ಆತಂಕವೂ ಇತ್ತು. ಆದರೆ ಸೋಂಕು ಕಡಿಮೆಯಾಗುತ್ತಿದೆ. ಬಹುತೇಕ ಶಾಲೆಗಳಲ್ಲಿ ಸ್ವಚ್ಛತೆ ಹಾಗೂ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿದ ಕಾರಣ ಯಾವುದೇ ಆತಂಕಕಾರಿ ಘಟನೆಗಳು ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದಷ್ಟೇ ಬಿಸಿಯೂಟ ಯೋಜನೆಗೂ ಮರುಚಾಲನೆ
ನೀಡಲಾಯಿತು.
ಈ ಎಲ್ಲ ಬೆಳವಣಿಗೆ 1ರಿಂದ 5ನೇ ತರಗತಿ ಪುನರಾರಂಭಿಸಲು ಸರ್ಕಾರಕ್ಕೆ ಪ್ರೇರಕ ಶಕ್ತಿಯಾಗಿದೆ.
ಶಿಕ್ಷಕರ ಸಿದ್ಧತೆ: ಈಗಾಗಲೇ ಪ್ರೌಢಶಾಲೆ ಹಂತದ ಶಾಲೆಗಳು ಆರಂಭವಾಗಿರುವ ಕಾರಣ, ಶಿಕ್ಷಕರು ಶಾಲೆಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ ಶಾಲೆಗಳ ಶುಚಿತ್ವದಿಂದ ಹಿಡಿದು ಬಾಕಿ ಉಳಿದಿರುವ ಎಲ್ಲ ಕೆಲಸಗಳನ್ನು ಮಾಡಿಕೊಳ್ಳಲಾಗಿದೆ. ಇದನ್ನು ಹೊರತುಪಡಿಸಿ ಮಾರ್ಗಸೂಚಿ ಸಹ ಬಿಡುಗಡೆ ಮಾಡಿದ್ದು, ಇವುಗಳನ್ನು ಪಾಲಿಸಲು ಶಿಕ್ಷಕರು ಸಿದ್ಧತೆ ಮಾಡಿಕೊಂಡಿದ್ದಾರೆ.
ಕರೊನಾ ಜಾಗತಿ: 1ರಿಂದ 5ನೇ ತರಗತಿವರೆಗಿನ ಮಕ್ಕಳ ಬಗ್ಗೆ ಮತ್ತು ಹಮ್ಮಿಕೊಳ್ಳಬೇಕಾಗಿರುವ ಮುಂಜಾಗ್ರತೆ ಕುರಿತು ಜಾಗತಿ ಮೂಡಿಸುವುದು ಅಗತ್ಯವಿದೆ. ಆದ್ದರಿಂದ ತರಗತಿ ಆರಂಭಕ್ಕೂ ಮುನ್ನ ಮಕ್ಕಳಿಗೆ ಸೋಂಕಿನ ಅರಿವು ಮೂಡಿಸುವ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಪನಿರ್ದೇಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮೊದಲ ವಾರ ಅರ್ಧ ದಿನ ಮಾತ್ರ :
ಶಾಲೆಗಳು ಅ.25ರಿಂದ ಆರಂಭವಾದರೂ, ಮೊದಲ ಒಂದು ವಾರ ಅರ್ಧ ದಿನಕ್ಕೆ ಶಾಲೆ ಆರಂಭವಾಗಲಿದೆ. ನ.2ರ ನಂತರ ಬೆಳಗ್ಗೆ 10ರಿಂದ 4ರವರೆಗೆ ಪೂರ್ಣ ಪ್ರಮಾಣದ ಶಾಲೆ ಆರಂಭಿಸಲಾಗುತ್ತದೆ. ಈ ಕುರಿತು ಸರ್ಕಾರ ಸ್ಪಷ್ಟ ಮಾರ್ಗಸೂಚಿ ಹೊರಡಿಸಿದೆ. ಹಾಗಾಗಿ ಮೊದಲ ವಾರ ಅರ್ಧ ದಿನಕ್ಕೆ ಶಾಲೆಗಳು ತೆರೆದುಕೊಳ್ಳಲಿವೆ.
ಪಾಲಕರಲ್ಲಿ ಆತಂಕ :
ಸೆಣ್ಣ ಮಕ್ಕಳಿಗೆ ಕರೊನಾ ನಿರೋಧಕ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಲಸಿಕೆ ನೀಡುವ ಸಂಬಂಧ ಸರ್ಕಾರ ಸ್ಪಷ್ಟ ನಿರ್ಧಾರ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಹಾಗಾಗಿ ಮೊದಲ ವಾರ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕಡಿಮೆಯಾದರೂ, ಮುಂದಿನ ದಿನಗಳಲ್ಲಿ ಸುಧಾರಿಸುವ ಸಾಧ್ಯತೆ ಇದೆ.