ಮೇಕಪ್ ಕಲಾವಿದೆಗೆ ಮೋಸ

MONEy
Published on

ಬೆಂಗಳೂರು: ಪ್ರಾಜೆಕ್ಟ್ ಸೋಗಿನಲ್ಲಿ ಮೇಕಪ್ ಕಲಾವಿದೆಗೆ ಕರೆ ಮಾಡಿದ ಸೈಬರ್ ಕಳ್ಳ 20 ಸಾವಿರ ರೂ. ಪಡೆದು ವಂಚಿಸಿದ್ದಾನೆ. ಹೊಸಕೆರೆಹಳ್ಳಿ ನಿವಾಸಿ ಮೇಕಪ್ ಕಲಾವಿದೆ ಪ್ರೀತಿ ವಂಚನೆಗೊಳಗಾದವರು. ಅವರು ಕೊಟ್ಟ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ದಕ್ಷಿಣ ವಿಭಾಗ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರೀತಿ ಅವರಿಗೆ ಜೂ.23ರಂದು ದಿನೇಶ್ ಎಂಬಾತ ಕರೆ ಮಾಡಿ ‘ಸ್ಪೀಡ್ ರೆಕಾರ್ಡ್ ಪ್ರೊಡಕ್ಷನ್ ಕಂಪನಿ’ಯವ ಎಂದು ಪರಿಚಯಿಸಿ ಕೊಂಡಿದ್ದ. ಗೋವಾದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಾಂಗ್ ಶೂಟಿಂಗ್ ನಡೆಯಲಿದೆ. ಖ್ಯಾತ ಗಾಯಕಿ ನೇಹಾ ಕಕ್ಕರ್ ಸೇರಿ ಹಲವು ಸ್ಟಾರ್​ಗಳು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುವ 20 ಮಂದಿಗೆ ನೀವು ಮೇಕಪ್ ಮಾಡಬೇಕು. ಅದಕ್ಕೆ ತಗಲುವ ಖರ್ಚನ್ನು ನೀಡುವುದಾಗಿ ಆಮಿಷ ಒಡ್ಡಿದ್ದ.

ಇನ್​ಸ್ಟಾಗ್ರಾಂನಲ್ಲಿ ಫಾಲೋ ಮಾಡ್ತಾರೆ: ಅಪರಿಚಿತನ ಆಮಿಷವನ್ನು ಮೊದಲು ಒಪ್ಪದ ಪ್ರೀತಿ, ನಮ್ಮಂತಹ ಚಿಕ್ಕವರನ್ನು ಹೇಗೆ ಸಂಪರ್ಕ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದರು. ಇನ್​ಸ್ಟಾಗ್ರಾಂನಲ್ಲಿ ನಿಮ್ಮ ಪ್ರೊಫೈಲ್ ಗಮನಿಸಿದೆ. ಒಳ್ಳೆಯ ಮೇಕಪ್ ಆರ್ಟಿಸ್ಟ್ ಎಂಬುದು ಗೊತ್ತಾಯಿತು. ಆದ್ದರಿಂದ, ನಿಮಗೆ ಈ ಆಫರ್ ನೀಡುತ್ತಿದ್ದೇವೆ. ಇದೊಂದು ಬೃಹತ್ ಪ್ರಾಜೆಕ್ಟ್. ಈ ಮಹತ್ವದ ಅವಕಾಶವನ್ನು ಉಪಯೋಗಪಡಿಸಿಕೊಂಡು ಕ್ಷೇತ್ರದಲ್ಲಿ ಗುರುತಿಸಿ ಕೊಂಡರೆ ಭವಿಷ್ಯದಲ್ಲಿ ಮತ್ತಷ್ಟು ದೊಡ್ಡ ಅವಕಾಶಗಳು ಸಿಗಲಿವೆ ಎಂದು ನಂಬಿಸಿದ್ದ. ಅದಕ್ಕೆ ಪ್ರತಿಕ್ರಿಯಿಸಿದ್ದ ಪ್ರೀತಿ, ‘ಕರೊನಾ ಸಮಸ್ಯೆ ಇದೆ, ಗೋವಾಗೆ ಹೇಗೆ ಬರಲಿ’ ಎಂದು ದಿನೇಶ್​ನನ್ನು ಪ್ರಶ್ನಿಸಿದ್ದರು. ಅದನ್ನೆಲ್ಲ ನಾವು ನೋಡಿಕೊಳ್ಳುತ್ತೇವೆ. ನಿಮ್ಮ ಜತೆ ಹೆಚ್ಚುವರಿ ಆರ್ಟಿಸ್ಟ್​ಗಳನ್ನು ಕರೆತನ್ನಿ ಎಂದಿದ್ದ.

ನಕಲಿ ವಿಮಾನ ಟಿಕೆಟ್: ಗೋವಾಗೆ ಬರಲು ನೀವೇ ಟಿಕೆಟ್ ಬುಕ್ ಮಾಡಿಕೊಳ್ಳುವಂತೆ ದಿನೇಶ್ ಹೇಳಿದ್ದ. ಆತನ ಮಾತನ್ನು ಒಪ್ಪದ ಪ್ರೀತಿ, ಪ್ರಾಜೆಕ್ಟ್​ಗೆ ಕೊಡುವ ಮುಂಗಡ ಹಣದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿ ಎಂದಿದ್ದರು. ನಮ್ಮಲ್ಲಿ ಆ ರೀತಿ ವ್ಯವಸ್ಥೆ ಇಲ್ಲ ಎಂದು ಆರೋಪಿ ಹೇಳಿದ್ದ. ನಂತರ ಪ್ರೀತಿ 20 ಸಾವಿರ ರೂ. ಒಟ್ಟುಗೂಡಿಸಿದ್ದರು. ಆರೋಪಿ ವಿಮಾನ ಟಿಕೆಟ್ ಅನ್ನು ವಾಟ್ಸ್ ಆಪ್​ಗೆ ಕಳುಹಿಸಿದ್ದ. ಅದನ್ನು ನಂಬಿದ ಪ್ರೀತಿ ಆತನ ಖಾತೆಗೆ 20 ಸಾವಿರ ರೂ. ಸಂದಾಯ ಮಾಡಿದ್ದಾರೆ. ಬಳಿಕ ಟಿಕೆಟ್ ಪರಿಶೀಲಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ಆರೋಪಿಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ವಾಟ್ಸ್​ಆಪ್ ಕೂಡ ಬ್ಲಾಕ್ ಮಾಡಿದ್ದ. ಆಗ ಮೋಸ ಹೋಗಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net