

ನವದೆಹಲಿ: ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದ್ದು, ರಾಜ್ಯದ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಯೋಗ ಪ್ರದರ್ಶನ ಮಾಡಲಿದ್ದಾರೆ. ಮಾತ್ರವಲ್ಲ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಆಗಮಿಸಲಿದ್ದಾರೆ.
ಈ ಮಧ್ಯೆ ಯೋಗದ ಮಹತ್ವದ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲರೂ ಯೋಗಾಭ್ಯಾಸಲ್ಲಿ ತೊಡಗಬೇಕು ಎಂಬ ಮನವಿ ಮಾಡಿಕೊಂಡಿದ್ದಾರೆ. ಈ ಸಂದೇಶ ಎಲ್ಲರನ್ನೂ ತಲುಪಬೇಕು ಎಂಬ ನಿಟ್ಟಿನಲ್ಲಿ ಅವರು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಹಲವು ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ.
"ಇನ್ನು ಕೆಲವೇ ದಿನಗಳಲ್ಲಿ, ಜಗತ್ತು ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಿದೆ. ಯೋಗ ದಿನವನ್ನು ನೀವೆಲ್ಲರೂ ಆಚರಿಸುವಂತೆ ಮತ್ತು ಯೋಗಾಭ್ಯಾಸವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಿ ಎಂದು ನಾನು ಆಗ್ರಹಿಸುವೆ. ಅದರಿಂದ ಆಗುವ ಲಾಭಗಳು ಹಲವಾರು.." ಎಂದು ಯೋಗ ಇನ್ ಅವರ್ ಡೈಲಿ ಲೈಪ್ ಎಂಬ ವಿಡಿಯೋ ಮೋದಿ ಹಂಚಿಕೊಂಡಿದ್ದಾರೆ.