

ಕೊಳ್ಳೇಗಾಲ: ದಾವಣಗೆರೆ ರಾಜನಹಳ್ಳಿ ಶ್ರೀ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಕೊಳ್ಳೇಗಾಲದಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ವಾಲ್ಮೀಕಿ ಗುರು ಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ನಾಯಕರ ದೊಡ್ಡ ಬೀದಿಯಲ್ಲಿರುವ ರಾಮಮಂದಿರದಲ್ಲಿ ಭಾನುವಾರ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಪೂರ್ವ ಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.
7ನೇ ವರ್ಷದ ಐತಿಹಾಸಿಕ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವಕ್ಕೆ ಇಡೀ ರಾಜ್ಯದ ನಾಯಕ ಸಮುದಾಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು. ಈ ಸಮಯದಲ್ಲಿ ನಾವೆಲ್ಲರೂ ಸಂಘಟಿತರಾಗಿದ್ದೇವೆ, ಜಾಗೃತರಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರವಾನಿಸಬೇಕು ಎಂದು ಕರೆ ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಬದ್ಧ ಹಕ್ಕನ್ನು ನಮಗೆ ನೀಡಿದ್ದಾರೆ. ಹಕ್ಕು ಜಾರಿ ಆಗಬೇಕಾದರೆ ನಾವೆಲ್ಲರೂ ಒಂದಾಗಬೇಕು. ಕೊಳ್ಳೇಗಾಲ ಕ್ಷೇತ್ರದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಎಸ್ಸಿ-ಎಸ್ಟಿ ಸಮುದಾಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ಶಾಸಕ ಎ.ಆರ್. ಕೃಷ್ಣಮೂರ್ತಿ, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಜಿ.ಪಂ. ಮಾಜಿ ಸದಸ್ಯ ಕೊಪ್ಪಳಿನಾಯಕ, ಮೈಸೂರಿನ ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ತಾಲೂಕು ನಾಯಕ ಸಂಘದ ಅಧ್ಯಕ್ಷ ಜಗದೀಶ್ ನಾಯಕ, ನಾಯಕ ಸಮುದಾಯದ ಯಜಮಾನ ಚಿಕ್ಕಮಾದನಾಯಕ, ಮುಖಂಡ ಉದ್ದನೂರು ಸಿದ್ದರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಸೇರಿದಂತೆ ನಾಯಕ ಸಮುದಾಯದ ಗಡಿ, ಕಟ್ಟೆ ಹಾಗೂ ಕಸಬಾ ಯಜಮಾನರು ಮತ್ತು ಮುಖಂಡರು ಇದ್ದರು.