ಸಂಪಾದಕೀಯ: ಅವಕಾಶ ಸದ್ಬಳಕೆಯಾಗಲಿ; ರಾಜ್ಯ ಸರ್ಕಾರದಿಂದ ಸಮರ್ಪಕ ನಿರ್ಧಾರ

edit 4
Published on

ಲಡಾಖ್ ಭಾಗದಲ್ಲಿ ಚೀನಾ ಅಪ್ರಚೋದಿತ ದಾಳಿ ನಡೆಸಿ, ಇದರಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಘಟನೆ ಬಳಿಕ ದೇಶಾದ್ಯಂತ ಚೀನಾದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಚೀನಿ ಸೈನಿಕರನ್ನು ಗಡಿಯಲ್ಲಿ ನಮ್ಮ ಯೋಧರು ಮಣಿಸಿದರೆ, ಜನಸಾಮಾನ್ಯರು ಆರ್ಥಿಕ ಯುದ್ಧದ ಮೂಲಕ ಡ್ರಾ್ಯಗನ್ ರಾಷ್ಟ್ರಕ್ಕೆ ಪಾಠ ಕಲಿಸಬೇಕು ಎಂಬ ಕೂಗು ಜೋರಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಚೀನಾ ಉತ್ಪನ್ನಗಳನ್ನು ನಿಷೇಧಿಸಬೇಕೆಂಬ ಆಗ್ರಹ ಕೇಳಿಬಂದಿತ್ತಾದರೂ, ಈ ಬಾರಿ ಇದು ಜನಾಂದೋಲನದ ಸ್ವರೂಪ ಪಡೆದುಕೊಳ್ಳುತ್ತಿರುವುದು ವಿಶೇಷ. ಅಲ್ಲದೆ, ಕರೊನಾ ಸೋಂಕು ಚೀನಾದಿಂದಲೇ ಆರಂಭವಾದ ಕಾರಣ ಜಾಗತಿಕ ಸಮುದಾಯ ಆ ರಾಷ್ಟ್ರದ ವಿರುದ್ಧ ತೀವ್ರ ಅಸಮಾಧಾನಗೊಂಡಿದೆ. ಅದರಲ್ಲೂ, ಚೀನಾದಲ್ಲಿ ಹೂಡಿಕೆ ಮಾಡಿರುವ ಕಂಪನಿಗಳು ಅಲ್ಲಿಂದ ಕಾಲು ಕೀಳಲು ತುದಿಗಾಲಿನಲ್ಲಿ ನಿಂತಿದ್ದು, ಹೂಡಿಕೆಸ್ನೇಹಿ ದೇಶಗಳತ್ತ ಚಿತ್ತ ಹರಿಸಿವೆ. ‘ಕರೊನಾ ಸಂಕಷ್ಟವನ್ನೇ ಅವಕಾಶವನ್ನಾಗಿ ಪರಿವರ್ತಿಸೋಣ’ ಎಂದು ದೇಶಕ್ಕೆ ಕರೆನೀಡಿರುವ ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರತೆಯ ಮಂತ್ರವನ್ನೂ ನೀಡಿದ್ದಾರೆ. ಒಂದೆಡೆ, ಕೇಂದ್ರ ಸರ್ಕಾರವು ಚೀನಾದಿಂದ ಹೊರಬರುತ್ತಿರುವ ಕಂಪನಿಗಳನ್ನು ಭಾರತಕ್ಕೆ ಕರೆತರಲು ಆಸಕ್ತಿ ತೋರಿದ್ದರೆ, ಮತ್ತೊಂದೆಡೆ, ರಾಜ್ಯಗಳ ಮಟ್ಟಿಗೆ ಕರ್ನಾಟಕವೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಕರ್ನಾಟಕ ಈಗ ಚೀನಾದ ವಿರುದ್ಧ ಸ್ಪರ್ಧೆಗೆ ಸಿದ್ಧಗೊಳ್ಳುತ್ತಿದೆ. ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಲೂ ಮುಂದಾಗಿದೆ.

ಹಿಂದಿನ ಸರ್ಕಾರ ರೂಪಿಸಿದ್ದ ಒಂಬತ್ತು ಕ್ಲಸ್ಟರ್​ಗಳ ಜತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್​ನಲ್ಲಿ ಮತ್ತೆರಡು ಕ್ಲಸ್ಟರ್ ಘೋಷಿಸಿದ್ದರು. ಒಟ್ಟು 11 ಕ್ಲಸ್ಟರ್​ಗಳ ಪೈಕಿ ಒಂಬತ್ತರಲ್ಲಿ ಚಟುವಟಿಕೆಗಳು ನಡೆದಿವೆ ಎಂಬುದು ಗಮನಾರ್ಹ. ಚೀನಾದಿಂದ ದಿನಬಳಕೆ ಮತ್ತು ಇತರ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬದಲು ನಮ್ಮ ರಾಜ್ಯದಲ್ಲೇ ಉತ್ಪಾದಿಸುವ ಮೂಲಕ ಆ ದೇಶಕ್ಕೆ ಸೆಡ್ಡು ಹೊಡೆಯಬೇಕು ಎಂಬುದು ಈ ಯೋಜನೆಯ ಮುಖ್ಯ ತಿರುಳು. ಚೀನಾ ವಸ್ತುಗಳಿಂದಾಗಿ ರಾಜ್ಯದಲ್ಲಿ ಮುಚ್ಚಿ ಹೋಗಿರುವ ಸಣ್ಣ ಕೈಗಾರಿಕೆಗಳಿಗೆ ಜೀವ ತುಂಬುವುದು, ಆ ಮೂಲಕ ಬಂಡವಾಳ ಆಕರ್ಷಣೆ, ನಿರುದ್ಯೋಗ ನಿವಾರಿಸುವುದು ಯೋಜನೆಯ ಪ್ರಮುಖ ಆಶಯವಾಗಿದೆ. ತಜ್ಞರನ್ನೊಳಗೊಂಡ ವಿಷನ್ ಗ್ರೂಪ್​ಗಳು ಸಿದ್ಧಪಡಿಸಿಕೊಟ್ಟ ವರದಿಯಂತೆ ಮೂಲಸೌಕರ್ಯ ಹಾಗೂ ಹೂಡಿಕೆದಾರರ ಜತೆ ಮಾತುಕತೆಗಳು ನಡೆದಿವೆ. ಈ ಕ್ರಮಗಳಿಂದ ರಾಜ್ಯದಲ್ಲಿ ಹೂಡಿಕೆ ಹೆಚ್ಚಾಗಿ, ನಿರುದ್ಯೋಗ ನಿವಾರಣೆಗೆ ಸಹಕಾರಿ ಆಗಲಿದೆ. ಆದರೆ, ಈ ಆಶಯ ಈಡೇರಬೇಕಾದರೆ ಅಧಿಕಾರಶಾಹಿಯ ವಿಳಂಬಧೋರಣೆ ಮತ್ತು ಭ್ರಷ್ಟಾಚಾರಕ್ಕೆ ಕೊನೆ ಹಾಡಲೇಬೇಕು. ತುಂಬ ಸಂದರ್ಭಗಳಲ್ಲಿ ಹೂಡಿಕೆದಾರರು ಲಂಚ ಮತ್ತು ವಿಳಂಬಧೋರಣೆಗೆ ಬೇಸತ್ತು ಯೋಜನೆಗಳಿಂದ ಹಿಂದೆ ಸರಿಯುತ್ತಾರೆ. ಹಾಗಾಗದೆ, ರಾಜ್ಯದ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪ್ರಸಕ್ತ ಯೋಜನೆ ವರವಾಗಿ ಪರಿಣಮಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net