ಪ್ರಗತಿಪರ ಕೃಷಿಕರನ್ನೇ ರೋಲ್‌ಮಾಡೆಲ್‌ಗಳನ್ನಾಗಿಸಿ

IMG-20250105-WA0211
ಕೆ.ಆರ್.ಪೇಟೆ ಪಟ್ಟಣದ ಪಶುಪಾಲನಾ ವೈದ್ಯಕೀಯ ಸೇವಾ ಕೇಂದ್ರದ ಆವರಣದಲ್ಲಿ ಪಶು ಸಂಗೋಪನಾ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆಗಳ ವತಿಯಿಂದ ಫಲಾನುಭವಿಗಳಿಗೆ ಸಲಕರಣೆಗಳನ್ನು ಎಚ್.ಟಿ.ಮಂಜು ವಿತರಿಸಿದರು.ಡಾ.ಎಚ್.ಎಸ್.ದೇವರಾಜು, ಜಗದೀಶ್, ಶೇಖರ್, ರಾಜು, ಸಿದ್ದರಾಜು, ನಂಜುಂಡಪ್ಪ ಇತರರು ಇದ್ದರು.
Published on

ಕೆ.ಆರ್.ಪೇಟೆ : ಪ್ರಗತಿಪರ ಕೃಷಿಕರನ್ನು ಗುರುತಿಸಿ ಅವರನ್ನೇ ಕೃಷಿ ಕ್ಷೇತ್ರದ ರೋಲ್ ಮಾಡೆಲ್‌ಗಳನ್ನಾಗಿ ಬಿಂಬಿಸುವಂತೆ ಶಾಸಕ ಎಚ್.ಟಿ.ಮಂಜು ಕರೆ ನೀಡಿದರು.

ಪಶು ಸಂಗೋಪನಾ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆಗಳ ವತಿಯಿಂದ ಪಟ್ಟಣದ ಪಶುಪಾಲನಾ ವೈದ್ಯಕೀಯ ಸೇವಾ ಕೇಂದ್ರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ತಾಲೂಕು ವ್ಯಾಪ್ತಿಯಲ್ಲಿಂದು ನೂರಾರು ಕೃಷಿಕರು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಕೃಷಿ ಕ್ಷೇತ್ರವನ್ನು ಲಾಭದಾಯಕವನ್ನಾಗಿಸಿಕೊಂಡಿದ್ದಾರೆ. ಇಂತಹ ಪ್ರಗತಿಪರ ಕೃಷಿಕರನ್ನು ಗುರುತಿಸಿ ಅವರುಗಳನ್ನೇ ಕೃಷಿ ಕ್ಷೇತ್ರದ ರೋಲ್‌ಮಾಡೆಲ್‌ಗಳನ್ನಾಗಿ ಇಲಾಖೆಗಳು ಬಿಂಬಿಸಿದರೆ ಅವರ ಪ್ರಭಾವ ನೆರೆಹೊರೆಯ ಇತರ ಕೃಷಿಕರ ಮೇಲೂ ಆಗುತ್ತದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕೃಷಿ ವಲಯ ಅಭಿವೃದ್ಧಿ ಹೊಂದಬೇಕಾದರೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು. ಕೃಷಿ ಕ್ಷೇತ್ರಕ್ಕೆ ನೇರ ಸಂಬಂಧವುಳ್ಳ ಈ ಐದು ಇಲಾಖೆಗಳು ಪರಸ್ಪರ ಒಗ್ಗೂಡಿ ಕೆಲಸ ಮಾಡಿದರೆ ಸರ್ಕಾರದ ಸವಲತ್ತುಗಳು ಮತ್ತು ನವೀನ ತಾಂತ್ರಿಕತೆಯನ್ನು ಕೃಷಿಕರಿಗೆ ತಲುಪಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಮಾಡಬಹುದು. ಕೃಷಿ ಕ್ಷೇತ್ರ ಲಾಭದಾಯಕವಾದರೆ ಗ್ರಾಮೀಣ ಪ್ರದೇಶದಲ್ಲಿಯೇ ಉದ್ಯೋಗ ಸೃಷ್ಟಿಯಾಗಿ ಗ್ರಾಮೀಣ ಯುವಕರ ವಲಸೆ ನಿಲ್ಲುತ್ತದೆ ಎಂದರು.

ಮೀನುಗಾರಿಕೆ ಇಲಾಖೆ ಕೇವಲ ಮೀನು ಮರಿಗಳನ್ನು ಕೊಡುವುದು, ಸರ್ಕಾರದ ಸಹಾಯಧನದ ಮೂಲಕ ಬಂದ ಬಲೆ. ಹರಿಗೋಲು ಮುಂತಾದವುಗಳನ್ನು ಕೊಡುವುದಕ್ಕೆ ಮಾತ್ರ ಸೀಮಿತವಾಗಬಾರದು. ತಾಲೂಕು ವ್ಯಾಪ್ತಿಯಲ್ಲಿ ನೂರಾರು ಕೆರೆ ಕಟ್ಟೆಗಳಿವೆ. ಕೆರೆ ಕಟ್ಟೆಗಳಿರುವ ಭಾಗದ ಯುವಕರಿಗೆ ಅರಿವು ಮೂಡಿಸಿ ಮೀನುಗಾರಿಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಹೇಮಾವತಿ ನದಿ ಉಗಮ ಸ್ಥಾನದಿಂದ ಅದು ಕಾವೇರಿಯಲ್ಲಿ ಲೀನವಾಗುವವರೆಗೂ ಒಬ್ಬನೇ ವ್ಯಕ್ತಿಗೆ ಮೀನುಗಾರಿಕೆ ಗುತ್ತಿಗೆ ನೀಡಲಾಗುತ್ತಿತ್ತು. ಈಗ ಅದನ್ನು ತಪ್ಪಿಸಲಾಗಿದೆ. ನದಿ ಪ್ರದೇಶದಲ್ಲೂ ಗ್ರಾಮೀಣ ಯುವಕರಿಗೆ ಮೀನುಗಾರಿಕೆ ತರಬೇತಿ ನೀಡಿ ಮೀನುಗಾರಿಕೆಯನ್ನು ಉದ್ಯಮವಾಗಿ ಪರಿವರ್ತಿಸುವ ಕೆಲಸವನ್ನು ಮೀನುಗಾರಿಕೆ ಇಲಾಖೆ ಮಾಡಬೇಕೆಂದರು.

ಪಶುಸಂಗೋಪನೆ ಈಗ ರೈತರಿಗೆ ಉಪಕಸುಬಾಗಿ ಉಳಿಯದೆ ಬದುಕುವ ಪ್ರಮುಖ ಕಸುಬಾಗಿ ಬೆಳೆದಿದೆ. ತಾಲೂಕಿನಾದ್ಯಂತ ಸುಮಾರು 22 ಸಾವಿರಕ್ಕೂ ಅಧಿಕ ರೈತರು ಹೈನುಗಾರಿಕೆಯನ್ನೇ ಮೂಲ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಹೈನುಗಾರಿಕೆಯ ಜತೆಗೆ ಹಂದಿ, ಕೋಳಿ, ಮೇಕೆ ಸಾಕಣೆಗೆ ಪಶು ಇಲಾಖೆ ಹೆಚ್ಚು ಒತ್ತು ನೀಡಬೇಕು. ಕೃಷಿ ಭೂಮಿಯನ್ನು ರೈತರಿಂದ ಲೀಸ್‌ಗೆ ಪಡೆದು ಹೈನೋದ್ಯಮ ಆರಂಭಿಸುವ ರೈತರ ಮಕ್ಕಳಿಗೂ ಸಾಲ ಸೌಲಭ್ಯ ಸಿಗುವಂತೆ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ನಾನು ಈಗಾಗಲೇ ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು ಇಲಾಖಾಧಿಕಾರಿಗಳು ಸಾಲ ಸೌಲಭ್ಯದ ಮಾಹಿತಿ ನೀಡುವಾಗ ಗುತ್ತಿಗೆ ಹೈನುಗಾರಿಕೆಯನ್ನು ಪರಿಗಣಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉದ್ದಿಮೆಯಾಗಿ ಪರಿವರ್ತನೆಗೊಂಡು ರೈತರ ಮಕ್ಕಳು ಅಭಿವೃದ್ದಿ ಹೊಂದಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಲೂಕು ಪಶು ವೈದ್ಯಾಧಿಕಾರಿ ಡಾ.ಎಚ್.ಎಸ್.ದೇವರಾಜು ಮಾತನಾಡಿ, ರಾಸುಗಳ ಗಣತಿಗೆ ನಮ್ಮ ಇಲಾಖೆಯ ಸಿಬ್ಬಂದಿ ಬಂದಾಗ ರೈತರು ತಮ್ಮ ರಾಸುಗಳ ವಿವರವನ್ನು ನೀಡಬೇಕು. ಇದರಿಂದ ತಾಲೂಕಿನ ರಾಸುಗಳ ಸಂಖ್ಯೆಯ ಸ್ಪಷ್ಟ ಮಾಹಿತಿ ದೊರಕಿ ಸರ್ಕಾರದ ಸವಲತ್ತುಗಳನ್ನು ತರಲು ಅನುಕೂಲವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಪಶು ಇಲಾಖೆ ವತಿಯಿಂದ ಹಮ್ಮಿಕೊಂಡಿರುವ 21 ನೇ ರಾಸುಗಳ ಗಣತಿ ಪ್ರಕ್ರಿಯೆಗೆ ಶಾಸಕರು ಚಾಲನೆ ನೀಡಿದರು. ಪಶು ಇಲಾಖೆಯ ವತಿಯಿಂದ ಅರ್ಹ ಫಲಾನುಭವಿಗಳಿಗೆ ಮೇವು ವಿದ್ಯುತ್ ಚಾಲಿತ ಮೇವು ಕತ್ತರಿಸುವ ಯಂತ್ರ, ಮೀನುಗಾರಿಕೆ ಇಲಾಖೆಯ ಬಲೆ, ಹರಿಗೋಲು ಮತ್ತಿತರ ಪರಿಕರಗಳನ್ನು ಶಾಸಕ ಎಚ್.ಟಿ.ಮಂಜು ವಿತರಿಸಿದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಗಂಗಾ ಪರಮೇಶ್ವರಿ ಮೀನುಗಾರರ ಸಂಘದ ಅಧ್ಯಕ್ಷ ಶೇಖರ್, ಕಾರ್ಯದರ್ಶಿ ರಾಜು, ನಿರ್ದೇಶಕರಾದ ಸಿದ್ದರಾಜು, ನಂಜುಂಡಪ್ಪ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net