

ಗುರ್ಗಾಂವ್: ಕರೊನಾ ವೈರಸ್ ಸಂಕಷ್ಟದ ಜತೆಗೆ ಬೆಳೆ ನಾಶಕರ ಮಿಡತೆಗಳ ದಂಡು ಒಂದಾದ ಬಳಿಕ ಒಂದು ರಾಜ್ಯಕ್ಕೆ ಪ್ರವೇಶ ಮಾಡುತ್ತಿದ್ದು, ಅವುಗಳ ನಿಯಂತ್ರಣವೂ ಕಷ್ಟವಾಗುತ್ತಿದೆ.
ಪಾಕಿಸ್ತಾನದಿಂದ ಬಂದಿರುವ ಮಿಡತೆಗಳು ಉತ್ತರ ಭಾರತದ ರಾಜ್ಯಗಳ ರೈತರನ್ನು ಹೈರಾಣಾಗಿಸಿವೆ. ಆ ಕೀಟಗಳಿಂದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆಯಾ ರಾಜ್ಯ ಸರ್ಕಾರಗಳು ಆದಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದೆ.
ಇದೀಗ ಮಿಡತೆಗಳ ದಂಡು ಹರಿಯಾಣಾದ ಬಳಿ ಕಾಣಿಸಿಕೊಂಡಿದ್ದು, ಅಲ್ಲಿನ ರೈತರಿಗೆ ಸರ್ಕಾರ ಮುನ್ನೆಚ್ಚರಿಕೆ ಕೊಟ್ಟಿದೆ. ಗುರ್ಗಾಂವ್ನಲ್ಲಿ ಕೂಡ ಸ್ಥಳೀಯ ಆಡಳಿತ ರೈತರನ್ನು ಎಚ್ಚರಿಸಿದೆ. ಮನೆಯ ಕಿಟಕಿಗಳನ್ನು ಸಾಧ್ಯವಾದಷ್ಟು ಮುಚ್ಚಿಕೊಂಡೇ ಇರಿ. ಪಾತ್ರೆ, ಡ್ರಮ್ಗಳನ್ನು ಬಡಿಯುವ ಮೂಲಕ ದೊಡ್ಡದಾಗಿ ಶಬ್ದ ಮಾಡಿ ಎಂದು ಸಲಹೆ ನೀಡಿದೆ.
ಮಿಡತೆಗಳ ಸಮೂಹ ಮಹೇಂದ್ರಗಢ್ ಜಿಲ್ಲೆಯನ್ನು ಪ್ರವೇಶಿಸಿದೆ. ಇನ್ನೇನು ರೇವಾರಿ ಗಡಿಯನ್ನು ತಲುಪಲಿದೆ. ರೈತರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮನೆಯ ಕಿಟಕಿಗಳನ್ನು ತೆರೆದಿಡಬಾರದು. ಹಾಗೇ ಪಾತ್ರೆಗಳು, ಡ್ರಮ್ಗಳನ್ನು ದೊಡ್ಡದಾಗಿ ಬಡಿಯುತ್ತಿರಬೇಕು. ದೊಡ್ಡದಾಗಿ ಸದ್ದು ಮಾಡುತ್ತಿದ್ದರೆ ಕೀಟಗಳು ಒಂದು ಕಡೆ ಉಳಿಯುವುದಿಲ್ಲ. ಅವು ಹಾರಿ ಮುಂದೆ ಹೋಗುತ್ತವೆ ಎಂದು ಗುರ್ಗಾಂವ್ ಆಡಳಿತ ತಿಳಿಸಿದೆ.
ಹಾಗೇ ರೈತರು ಕೀಟನಾಶಕ ಸಿಂಪಡಣಾ ಪಂಪ್ಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಯಾವಾಗ ಅಗತ್ಯಬಿದ್ದರೂ ಅದನ್ನು ಉಪಯೋಗಿಸಿ. ಬೆಳೆ ರಕ್ಷಣೆ ಆದ್ಯತೆಯಾಗಲಿ ಎಂದು ಹೇಳಿದೆ. ಇದನ್ನೂ ಓದಿ: ಇನ್ಸ್ಟಾಗ್ರಾಂ ಮಿತ್ರನಿಗಾಗಿ ಮನೆ ಬಿಟ್ಟ ಬಾಲಕಿ: ಬಲೆಗೆ ಬೀಳುವಷ್ಟರಲ್ಲಿ ಬಚಾವ್ ಆಗಿದ್ಹೇಗೆ?
ಅಷ್ಟೇ ಅಲ್ಲ, ರೈತರಿಗೆ ಮಿಡತೆಗಳ ದಾಳಿ ಬಗ್ಗೆ ಸರಿಯಾದ ಅರಿವು ಮೂಡಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದೆ. ಮಿಡತೆಗಳು ಈಗಾಗಲೇ ಮಹಾರಾಷ್ಟ್ರ, ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶಗಳಲ್ಲಿ ಬೆಳೆ ನಾಶ ಮಾಡಿವೆ.
ಮಿಡತೆ ದಾಳಿ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಒಟ್ಟು 11 ಕಂಟ್ರೋಲ್ ರೂಂಗಳನ್ನು ರಚಿಸಿದೆ. (ಏಜೆನ್ಸೀಸ್)