

ಜಿನೇವಾ: ಕರೊನಾ ವೈರಸ್ ತಡೆಗಟ್ಟುವ ವಿಚಾರದಲ್ಲಿ ಜಗತ್ತಿನಾದ್ಯಂತ ವಿವಿಧ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಹೀಗಾಗಿ ಬಹುದೊಡ್ಡ ಅಂತರವೂ ಇದೆ. ಜಗತ್ತಿನ ಯಾವುದೇ ರಾಷ್ಟ್ರದ ಕ್ರಮವೂ ಸರಿಯಾಗಿದೆ, ಪರಿಸ್ಥಿತಿ ನಿಯಂತ್ರಣದಲ್ಲಿ ಇದೆ ಎಂದು ಹೇಳೋದಕ್ಕೆ ಆಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ಹೇಳಿದ್ದಾರೆ.
COVID19 ಅಪ್ಡೇಟ್ಸ್ ಕುರಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ತಡೆ ಹಿಡಿದ ನಿರ್ಧಾರವನ್ನು ಟ್ರಂಪ್ ಆಡಳಿತ ಮರುಪರಿಶೀಲಿಸಬಹುದು ಎಂಬ ನಿರೀಕ್ಷೆ. ಆದರೆ ಟ್ರಂಪ್ ಅವರ ಸಂಪೂರ್ಣ ದೃಷ್ಟಿ ಸಾಂಕ್ರಾಮಿಕ ರೋಗ ತಡೆಯುವುದು ಹೇಗೆ ಮತ್ತು ಜನರ ಜೀವ ಉಳಿಸುವುದು ಹೇಗೆ ಎಂಬುದರತ್ತ ಇದೆ ಎಂದು ಟೆಡ್ರೋಸ್ ಹಳಸಿರುವ ಸಂಬಂಧ ಸರಿಪಡಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಡಬ್ಲ್ಯುಎಚ್ಒದ ಕೆಲಸವನ್ನು ಅಮೆರಿಕ ಬೆಂಬಲಿಸುತ್ತದೆ ಎಂಬ ನಿರೀಕ್ಷೆ ಇದ್ದು, ಕರೊನಾ ಸೋಂಕಿನ ವಿಷಯದಲ್ಲಿ ಅಮೆರಿಕ ಮಹತ್ವದ ಹೂಡಿಕೆ ಮಾಡುತ್ತಿದೆ ಎಂದು ಭಾವಿಸಬಹುದು. ಅದು ತನ್ನ ರಾಷ್ಟ್ರದ ಜನರ ಜೀವ ಉಳಿಸುವುದಕ್ಕಷ್ಟೇ ಅಲ್ಲ, ಜಗತ್ತಿನ ಜನರ ಉಪಯೋಗಕ್ಕಾಗಿಯೂ ಎಂದು ಅರ್ಥಮಾಡಿಕೊಂಡು ಅನುದಾನ ತಡೆಹಿಡಿದ ನಿರ್ಧಾರ ಮರುಪರಿಶೀಲಿಸಬಹುದು ಎಂಬ ನಿರೀಕ್ಷೆಯನ್ನು ಟೆಡ್ರೋಸ್ ಮತ್ತೆ ಮತ್ತೆ ವ್ಯಕ್ತಪಡಿಸಿದರು.
ಬಹುತೇಕ ರಾಷ್ಟ್ರಗಳು ಆಯಾ ರಾಷ್ಟ್ರಗಳಲ್ಲಿ ಕರೊನಾ ಸೋಂಕಿನ ಆರಂಭಿಕ ಹಂತದಲ್ಲಷ್ಟೇ ಇವೆ. ಹೀಗಾಗಿ ಕಡಿಮೆ ಸಾವು, ನೋವು, ನಾಶ ನಷ್ಟಗಳು ಗೋಚರವಾಗುತ್ತಿವೆ. ಈ ವೈರಸ್ ನಮ್ಮ ಜತೆಗೇ ಬದುಕಿನ ಬಹುದೀರ್ಘಕಾಲ ಇರಲಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಭಾರಿ ತೊಂದರೆ, ಅನಾಹುತವಾಗುವುದು ಖಚಿತ ಎಂದು ಪಶ್ಚಿಮ ಯುರೋಪ್ನ ಸೋಂಕು ಇಳಿಕೆ ಪ್ರಮಾಣ ಉಲ್ಲೇಖಿಸಿ ಟೆಡ್ರೋಸ್ ಎಚ್ಚರಿಸಿದ್ದಾರೆ. (ಏಜೆನ್ಸೀಸ್)