ಕನ್ನಡದ ಕೆಲಸಗಳು ಎಲ್ಲರನ್ನೂ ಒಳಗೊಳ್ಳುವಂತಿರಲಿ: ಟಿ.ಎಸ್. ನಾಗಾಭರಣ ಅಭಿಮತ

hal
Published on

ಬೆಂಗಳೂರು: ಪ್ರಸ್ತುತ ಕನ್ನಡದ ಕೆಲಸಗಳು ಬಿಡಿ ಬಿಡಿಯಾಗಿ ನಡೆಯುತ್ತಿದ್ದು, ಒಂದೇ ಸೂತ್ರದಡಿ ಸಮಾನ ಅಂಶಗಳನ್ನಿಟ್ಟುಕೊಂಡು ಕಾರ್ಯನಿರ್ವಹಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸೂತ್ರದಡಿ ಕನ್ನಡ ಕೆಲಸಗಳು ಎಲ್ಲರನ್ನೂ ಒಳಗೊಳ್ಳುವಂತಿರಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.

ನಗರದ ಎಚ್‌ಎಎಲ್‌ನ ಡಾ. ವಿ.ಎಂ.ಘಾಟ್ಗೆ ಸಭಾಂಗಣದಲ್ಲಿ ಭಾನುವಾರ ಎಚ್‌ಎಎಲ್‌ನ ಧ್ರುವ ಕನ್ನಡ ಸಂಘದ 20ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಒಡೆಯುವ ಕೆಲಸಗಳು ಆಗುತ್ತಿವೆ. ಇದಕ್ಕೆ ಕನ್ನಡವೂ ಹೊರತಾಗಿಲ್ಲ. ಇದನ್ನು ಜಾಣ್ಮೆಯಿಂದ ನಿವಾರಿಸಿಕೊಳ್ಳಲು ಆಸ್ಥೆ ವಹಿಸಬೇಕು. ಇವನಾರವ, ಇವನಾರವನೆಂದೆನಿಸದಿರಯ್ಯ. ಇವ ನಮ್ಮವ, ಇವ ನಮ್ಮವ ಎಂಬ ಬಸವಣ್ಣನ ಮಾತು ಆದರ್ಶವಾಗಿ ಇಟ್ಟುಕೊಂಡಲ್ಲಿ ಒಗ್ಗಟ್ಟು ಸಾಧ್ಯ ಎಂದರು.

ಸರ್ ಎಂವಿ, ಮಿರ್ಜಾ ಪ್ರತಿಮೆ ಸ್ಥಾಪಿಸಲಿ:

ಕನ್ನಡ ಪರಿಚಾರಕ ರಾ.ನಂ. ಚಂದ್ರಶೇಖರ ಮಾತನಾಡಿ, ಎಚ್‌ಎಎಲ್ ದೇಶದ ರಕ್ಷಣೆಯಷ್ಟೇ ಅಲ್ಲ, ಚಂದ್ರಯಾನದ ಯಶಸ್ಸಿಗೂ ಕಾಣಿಕೆ ನೀಡಿದೆ. ಸಂಸ್ಥೆಯ ಸ್ಥಾಪನೆಗೆ ಮೈಸೂರು ಸಂಸ್ಥಾನದ ಕೊಡುಗೆ ದೊಡ್ಡದಿದ್ದು, 80 ವರ್ಷಗಳ ಹಿಂದೆ 2,000 ಎಕರೆ ಜಮೀನು ನೀಡಲಾಗಿದೆ. ಇದಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾಮರಾಜ ಒಡೆಯರ್ ಅವರ ಪ್ರತಿಮೆಗಳನ್ನು ಸ್ಥಾಪಿಸಿ ಗೌರವಿಸಿದೆ. ಕಾರ್ಖಾನೆಯ ಸ್ಥಾಪನೆಯಲ್ಲಿ ಇಷ್ಟೇ ಮಹತ್ವದ ಪಾತ್ರ ವಹಿಸಿದ ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಲ್ ಪ್ರತಿಮೆಗಳನ್ನೂ ಸ್ಥಾಪಿಸುವ ಅಗತ್ಯವಿದೆ. ಜತೆಗೆ ಕನ್ನಡ ನಾಡಿಗೆ ಆಡಳಿತವರ್ಗ ವೈಮಾಂತರಿಕ್ಷ ನಿಘಂಟನ್ನು ಪ್ರಕಟಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಎಚ್‌ಎಎಲ್ ರೋಟರಿವಿಂಗ್ ವಿಭಾಗದ ವ್ಯವಸ್ಥಾಪಕ ಎಸ್.ಶ್ರೀಧರ್, ನಟಿ ಅನೂಷ ರೈ, ಎಚ್‌ಎಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಮಹೇಶ ಅಂಗಡಿ, ಲಲಿತಾ ಕಲಾ ಸಂಘದ ರಾಜುಹಾಸನ್, ಕೇಂದ್ರೀಯ ಕನ್ನಡ ಸಂಘದ ಕಾರ್ಯದರ್ಶಿ ಡಿ.ರಾಜೇಶ, ಧ್ರುವ ಕನ್ನಡ ಸಂಘದ ಅಧ್ಯಕ್ಷ ಕೆ.ಡಿ. ದೇವರಾಜ್, ಕಾರ್ಯದರ್ಶಿ ಮಂಜಣ್ಣ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net