ಗ್ರಾಮಪಂಚಾಯಿತಿಗಳನ್ನು ಬಲಪಡಿಸಿ

ವಿಜಯವಾಣಿ (9)
Published on

ಅಧಿಕಾರವು ಕೇಂದ್ರೀಕೃತವಾಗಿರದೆ, ವಿಕೇಂದ್ರೀಕರಣವಾಗಬೇಕು, ಆ ಮೂಲಕ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಂತೆ ಕಾರ್ಯನಿರ್ವಹಿಸಿ ಅಭಿವೃದ್ಧಿ ಪ್ರಕ್ರಿಯೆಗೆ ಶಕ್ತಿ ತುಂಬಬೇಕು ಎಂಬ ಆಶಯವೇ ದಿನಗಳೆದಂತೆ ಮರೆಯಾಗುತ್ತಿರುವುದು ವಿಪರ್ಯಾಸ. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಮೂಲಕ 1992ರಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಂವಿಧಾನಬದ್ಧಗೊಳಿಸಲಾಯಿತು. ಈ ಸ್ವಾಗತಾರ್ಹ ಕ್ರಮದ ಬಳಿಕ ಗ್ರಾಮಗಳು ಆಡಳಿತದ ಶಕ್ತಿಕೇಂದ್ರಗಳಾಗಿ ರೂಪುಗೊಳ್ಳುತ್ತವೆ ಎಂದೇ ಭಾವಿಸಲಾಗಿತ್ತು. ಆದರೆ, ಮತ್ತೆ ಅಧಿಕಾರವು ಬೆಂಗಳೂರಿಗೆ ಕೇಂದ್ರೀಕೃತವಾಗಿ, ಹಿರಿಯ ಅಧಿಕಾರಿಗಳೇ ದರ್ಬಾರ್ ನಡೆಸುವಂತಾಗಿರುವುದರಿಂದ ಗ್ರಾಮ ಪಂಚಾಯಿತಿಗಳು ದುರ್ಬಲವಾಗಿ, ಆರ್ಥಿಕ ಸಂಕಷ್ಟವನ್ನೂ ಎದುರಿಸುತ್ತಿವೆ. ಸರ್ಕಾರಿ ಯೋಜನೆಗಳ ಜಾರಿ, ಗ್ರಾಮಗಳ ಅಭಿವೃದ್ಧಿ ಕಾರ್ಯಗಳಲ್ಲಿ ಜನರನ್ನು ತೊಡಗಿಸುವುದು, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವುದು, ಮೂಲಸೌಕರ್ಯಗಳನ್ನು ಕಲ್ಪಿಸುವುದು, ಅಭಿವೃದ್ಧಿಯ ಹೊಸ ಆಯಾಮಗಳಿಗೆ ತೆರೆದುಕೊಳ್ಳುವುದು ಹೀಗೆ ಹಲವು ಮಹತ್ತರ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುವ ಗ್ರಾಪಂಗಳನ್ನು ರಾಜ್ಯ ಸರ್ಕಾರವೇ ಅತಿಯಾದ ಹಸ್ತಕ್ಷೇಪದ ಮೂಲಕ ಬಲಹೀನಗೊಳಿಸುತ್ತಿರುವುದು ದುರದೃಷ್ಟಕರ.

ರಾಜ್ಯದಲ್ಲಿ ಆರು ಸಾವಿರಕ್ಕೂ ಅಧಿಕ ಗ್ರಾಪಂಗಳು ಹಾಗೂ ಒಂದು ಲಕ್ಷಕ್ಕೂ ಅಧಿಕ ಜನಪ್ರತಿನಿಧಿಗಳಿದ್ದಾರೆ. ಹಿರಿಯ ಅಧಿಕಾರಿಗಳ, ಇತರ ಜನಪ್ರತಿನಿಧಿಗಳ, ಒಟ್ಟಾರೆ ಸರ್ಕಾರದ ಅತಿಯಾದ ಹಸ್ತಕ್ಷೇಪದಿಂದ ಗ್ರಾಪಂಗಳು ಆಡಳಿತ ನಿರ್ವಹಿಸುವ ಆಸಕ್ತಿಯನ್ನೇ ಕಳೆದುಕೊಂಡಿವೆ. ಯೋಜನೆ ಜಾರಿಗಾಗಿ ಗ್ರಾಪಂಗಳಿಗೆ ನಿರ್ದೇಶನ ನೀಡುವ ಸರ್ಕಾರ, ಸೂಕ್ತ ಅನುದಾನವನ್ನೇ ನೀಡುವುದಿಲ್ಲ. ಅಲ್ಲದೆ, ಸ್ಥಳೀಯವಾಗಿ ಅವಲೋಕನ ನಡೆಸದೆ ಎಷ್ಟೋ ಯೋಜನೆಗಳು ಮೇಲಿನ ಹಂತದಲ್ಲೇ ನಿರ್ಣಯಿಸಿ ಅನುಷ್ಠಾನಕ್ಕೆ ಒತ್ತಡ ಹೇರುವುದು ಅವ್ಯವಸ್ಥೆಯ ನಿದರ್ಶನವೇ ಸರಿ. ಗ್ರಂಥಾಲಯಗಳು, ಕೂಸಿನ ಮನೆ, ಘನತ್ಯಾಜ್ಯ ವಿಲೇವಾರಿ ಘಟಕ ಹೀಗೆ ಮುಂತಾದ ಯೋಜನೆಗಳನ್ನು ರಾಜ್ಯ ಮಟ್ಟದಲ್ಲೇ ರೂಪಿಸಿ ಗ್ರಾಪಂಗಳಿಗೆ ಅನುಷ್ಠಾನದ ಹೊಣೆಗಾರಿಕೆ ನೀಡಲಾಗುತ್ತದೆ. ಆದರೆ, ಸರ್ಕಾರ ಅವಶ್ಯಕ ಅನುದಾನದ ಬೆಂಬಲ ನೀಡದೆ ಸ್ವಂತ ಸಂಪನ್ಮೂಲ ಅಥವಾ ಲಭ್ಯ ಇರುವ ಅನುದಾನದಲ್ಲೇ ಯೋಜನೆ ಜಾರಿಗೆ ತರಲು ಹೇಳುತ್ತಿದೆ.

ಇದರಿಂದ ರಾಜ್ಯದ ಶೇಕಡ 95ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ. ಅಲ್ಲದೆ, ಇವು ಸ್ಥಳೀಯವಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೇಲ್ಪಟ್ಟದ ಅಧಿಕಾರಿಗಳೇ ಎಲ್ಲ ನಿರ್ಣಯಗಳನ್ನು ತಳೆದು, ಜಾರಿಯ ಜವಾಬ್ದಾರಿ ಮಾತ್ರ ಗ್ರಾಪಂಗಳಿಗೆ ವಹಿಸುತ್ತಿದ್ದಾರೆ. ಈ ಸಮಸ್ಯೆಗಳ ಕುರಿತಂತೆ ರಾಜ್ಯ ಸರ್ಕಾರಕ್ಕೆ ಅರಿವು ಇಲ್ಲ ಅಂತೇನಲ್ಲ. ಈ ಹಿಂದೆಯೂ ಗ್ರಾಮ ಪಂಚಾಯಿತಿಗಳ ಸದಸ್ಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಆದರೂ, ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದೆ ಇರುವುದರಿಂದ ಇದೇ ಅಕ್ಟೋಬರ್ 2ರಂದು ಮತ್ತೆ ಬೆಂಗಳೂರಿನಲ್ಲಿ ಹೋರಾಟ ನಡೆಸಲು ತೀರ್ವನಿಸಿದ್ದಾರೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು, ಇವರ ಸಮಸ್ಯೆಗಳನ್ನು ಆಲಿಸಬೇಕು ಮತ್ತು ಆಡಳಿತ ವಿಕೇಂದ್ರೀಕರಣದ ಆಶಯ ನೆರವೇರಲು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net