ವಿಶ್ವಕರ್ಮ ಯೋಜನೆ ಸದ್ಬಳಕೆ ಮಾಡಿಕೊಳ್ಳಿ

16-TTH-03
ತೀರ್ಥಹಳ್ಳಿಯಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಸಮಾಜೋದ್ಧಾರಕ ಸಂಘದ ಕಾರ್ಯಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ರತ್ನಾಕರ್ ಆಚಾರ್ಯ, ಸುಧೀರ್ ಆಚಾರ್ಯ ಇತರರಿದ್ದರು.
Published on

ತೀರ್ಥಹಳ್ಳಿ: ಅನಾದಿ ಕಾಲದಿಂದ ಭಾರತೀಯ ಶಿಲ್ಪಕಲಾ ಪ್ರಕಾರದ ಪರಂಪರೆ ಮುಂದುವರಿಸುತ್ತಿರುವ ವಿಶ್ವಕರ್ಮ ಸಮಾಜದ ಜನರು ಹೆಚ್ಚು ಪ್ರತಿಭಾವಂತರು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ವಿಶ್ವಕರ್ಮ ಸಮಾಜೋದ್ಧಾರಕ ಸಂಘದಿಂದ ಪಟ್ಟಣದ ಕುರುವಳ್ಳಿ ಬಡಾವಣೆಯ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇದ್ದು, ಭವಿಷ್ಯ ಉಜ್ವಲಗೊಳಿಸಲು ಮತ್ತು ಸಮಾಜದ ಆಸ್ತಿಯಾಗಿ ರೂಪಿಸಲು ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಇಂದಿನಂತೆ ಅತ್ಯಾಧುನಿಕ ಸವಲತ್ತುಗಳು ಇಲ್ಲದ ಕಾಲದಿಂದಲೂ ಸ್ವಪ್ರತಿಭೆಯಿಂದ ಕಲಾ ಪ್ರಕಾರದ ಘನತೆ ಹೆಚ್ಚಿಸಿರುವ ಸಮಾಜದ ಜನರು ಶಿಲ್ಪಕಲೆಯಲ್ಲಿ ಇಂಜಿನಿಯರ್ ಆಗಿದ್ದಾರೆ. ಸಮುದಾಯದ ಪ್ರತಿಭೆ ಗುರುತಿಸಿರುವ ಕೇಂದ್ರ ಸರ್ಕಾರ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಸಲು ವಿಶ್ವಕರ್ಮ ಸಮಾಜದ ಹೆಸರಿನಲ್ಲಿ ತಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಗೌರವಿಸಲಾಯಿತು. ಕಟ್ಟೆಹಕ್ಕಲು ರತ್ನಾಕರ್ ಆಚಾರ್ಯ, ಸಮಾಜದ ಪುರೋಹಿತರಾದ ಸುಧೀರ್ ಆಚಾರ್ಯ, ರಾಘವೇಂದ್ರ ಆಚಾರ್ಯ, ಶಂಕರ ಆಚಾರ್ಯ ಹಾಗೂ ನಾಗಪ್ಪಾಚಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net