ಪಿಎಂ ಸ್ವನಿಧಿ ಯೋಜನೆ ಸದ್ಬಳಕೆಯಾಗಲಿ: ಸುರೇಶ್

swanidhi
ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆ ಮಾಹಿತಿ ಕಾರ್ಯಕ್ರಮವನ್ನು ಎಸ್.ಶಿವಕುಮಾರ್ ಉದ್ಘಾಟಿಸಿದರು. ರಘುನಾಥ್, ವೆಂಕಟರಾಮುಲು, ಅನುಪಮಾ, ಅಮರನಾಥ್, ಜಿತೇಂದ್ರ ಮುಂತಾದವರಿದ್ದರು.
Published on

ಶಿವಮೊಗ್ಗ: ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಯೋಜನೆ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುತ್ತಿದೆ. ಇದನ್ನು ವ್ಯಾಪಾರಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ತಿಳಿಸಿದರು.

ಲೀಡ್ ಬ್ಯಾಂಕ್ ಆವರಣದಲ್ಲಿ ಶನಿವಾರ ಡೇ ನಲ್ಮ್ ಯೋಜನೆ, ನಗರ ಪಾಲಿಕೆ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಏರ್ಪಡಿಸಿದ್ದ ಸಾಲ ಮೇಳ, ಸ್ವನಿಧಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರಿಗೆ ಯಾವುದೇ ಜಾಮೀನು ಇಲ್ಲದೇ ಕೇವಲ ಆಧಾರ್ ಕಾರ್ಡ್ ಮತ್ತು ಸ್ಥಳೀಯ ಆಡಳಿತದ ಬೀದಿ ಬದಿ ವ್ಯಾಪಾರಿಯ ಐಡಿ ಕಾರ್ಡ್ ಪರಿಗಣಿಸಿ ಮೊದಲ ಬಾರಿಗೆ 10 ಸಾವಿರ ರೂ. ಸಾಲ ನೀಡಲಾಗುವುದು. 12 ತಿಂಗಳು ತಪ್ಪದೇ ಕಂತು ಪಾವತಿಸುವವರಿಗೆ ಎರಡನೇ ಬಾರಿ 20 ಹಾಗೂ ಮೂರನೇ ಬಾರಿ 50 ಸಾವಿರ ರೂ. ಸಾಲ ನೀಡಲಾಗುತ್ತದೆ ಎಂದರು.
ಕ್ಯೂ ಆರ್ ಕೋಡ್ ಬಳಕೆ ಮಾಡಿದಲ್ಲಿ ಒಂದು ತಿಂಗಳಲ್ಲಿ ಕನಿಷ್ಠ ನೂರು ಚಲಾವಣೆ ಆದಲ್ಲಿ ಅವರಿಗೆ ಕ್ಯಾಶ್ ಬ್ಯಾಕ್ ಸೌಲಭ್ಯ ಕೂಡ ಸಿಗುತ್ತದೆ. ಸಾಲ ಪಡೆದವರು ಸುಸ್ತಿದಾರರಾಗಬಾರದು. ಡಿಜಿಟಲ್ ಪೇಮೆಂಟ್ ಮಾಡುವುದರಿಂದ ಅನೇಕ ಲಾಭವಿದೆ. ಸಾಲ ಕಟ್ಟಲು ಸುಲಭವಾಗುತ್ತದೆ. ವ್ಯಾಪಾರ ವೃದ್ಧಿಯಾಗುತ್ತದೆ. ಚಿಲ್ಲರೆ ಅಭಾವ ಹೋಗಲಾಡಿಸಬಹುದು. ಕ್ಯಾಶ್‌ಲೆಸ್ ಆಗುವುದರಿಂದ ಅನೇಕ ಸೌಲಭ್ಯಗಳು ದೊರೆಯುತ್ತವೆ ಎಂದು ತಿಳಿಸಿದರು.
ಕಾರ್ಮಿಕ ಇಲಾಖೆ ನಿರೀಕ್ಷಕ ರಘುನಾಥ್ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಇರುವ ಕಾನೂನಿನ ರಕ್ಷಣೆ ಬಗ್ಗೆ ವಿವರಿಸಿದರು.
ಮೇಯರ್ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಅಮರನಾಥ್, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ ಪ್ರಬಂಧಕ ವೆಂಕಟರಾಮುಲು, ಡೇನಲ್ಮ್ ಯೋಜನೆಯ ಸ್ಟೇಟ್ ಮಿಷನ್ ಮ್ಯಾನೇಜರ್ ಜಿತೇಂದ್ರ, ಅನುಪಮಾ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net