

ಶಿವಮೊಗ್ಗ: ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ ಹಾಗೂ ವಿದ್ಯಾರ್ಥಿವೇತನ ನೀಡುತ್ತಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಡಿಡಿಪಿಐ ಎಸ್.ಆರ್.ಮಂಜುನಾಥ್ ಹೇಳಿದರು.
ನಗರದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ತಾಲೂಕುಮಟ್ಟದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಶಿಕ್ಷಣವನ್ನು ಮಾತ್ರವಲ್ಲದೆ ವಿದ್ಯಾರ್ಥಿಗಳ ಓದಿಗೆ ಪೂರಕವಾದ ಯೂನಿಫಾರ್ಮ್, ಶೂ, ಸಾಕ್ಸ್ ಒಳಗೊಂಡಂತೆ ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ಪೂರೈಸುತ್ತಿದೆ. ಪಿಎಂ ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಬಿಸಿ ಊಟ, ಕೆನೆಭರಿತ ಹಾಲು, ರಾಗಿ ಮಾಲ್ಟ್, ಪೌಷ್ಟಿಕತೆಗೆ ಪೂರಕವಾದ ಮೊಟ್ಟೆ ಹಾಗೂ ಬಾಳೆಹಣ್ಣನ್ನು ನೀಡಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಲ್ಲ ಮಕ್ಕಳಿಗೆ ಆರೋಗ್ಯದ ಹಿತದೃಷ್ಟಿಯಿಂದ ದೇಹದಲ್ಲಿ ಉಂಟಾಗುವಂತಹ ರಕ್ತಹೀನತೆ ಹೋಗಲಾಡಿಸಲು ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸದೆ ಸರ್ಕಾರಿ ಶಾಲೆಗಳಿಗೆ ಸೇರಿಸಿ ಈ ಮೂಲಕ ಸರ್ಕಾರಿ ಶಾಲೆಗಳ ಉನ್ನತಿಗಾಗಿ ಶ್ರಮಿಸಲು ಸಹಕಾರ ನೀಡಿ ಎಂದು ಕೋರಿದರು.
ಅಕ್ಷರ ದಾಸೋಹ ಕಚೇರಿ ಪ್ರಥಮ ದರ್ಜೆ ಸಹಾಯಕ ರಾಜೇಶ್, ಯೋಜನೆಯ ಪೂರಕವಾದ ಪೌಷ್ಟಿಕ ಆಹಾರದ ಕುರಿತು ಪಿಪಿಟಿ ಪ್ರೆಸೆಂಟೇಷನ್ ನೀಡಿದರು. ಕ್ಷೇತ್ರ ಸಮನ್ವಯ ಅಧಿಕಾರಿ ಶಿವಪ್ಪ ಸಂಗಣ್ಣನವರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಎಚ್.ಮೋಹನೇಶ್, ಎಸ್‌ಡಿಎಂಸಿ ಉಪಾಧ್ಯಕ್ಷ ಸತೀಶ್, ಬೆಂಗಳೂರು ವಿಭಾಗದ ಎಪಿಎಫ್ ಕೋ-ಆರ್ಡಿನೇಟರ್ ಪ್ರಭಾನಂದ ಹೆಗಡೆ, ಕೆಪಿಎಸ್ ಶಾಲೆಯ ಉಪ ಪ್ರಾಚಾರ್ಯ ದಾದಾಪೀರ್, ಶಿಕ್ಷಣ ಸಂಯೋಜಕರಾದ ಶಶಿರೇಖಾ, ಹರೀಶ್, ಮೋಹನ್, ಬಿಆರ್‌ಪಿ ಧನಂಜಯ್ ಉಪಸ್ಥಿತರಿದ್ದರು.