

Dr Vishnuvardhan: ಕೆಂಗೇರಿ ಬಳಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಹಿರಿಯ ನಟ ಡಾ. ವಿಷ್ಣುವರ್ಧನ್ ಸಮಾಧಿಯನ್ನು ನೆಲಸಮ ಮಾಡಿರುವ ಬಗ್ಗೆ ರಾಜ್ಯಾದ್ಯಂತ ಅನೇಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಈ ವಿಷಯವಾಗಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸ್ಮಾರಕವನ್ನು ರಾಷ್ಟ್ರಮಟ್ಟದ ಪ್ರವಾಸಿ ಕೇಂದ್ರವನ್ನಾಗಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಶುದ್ಧ ಕುಡಿವ ನೀರಿಗೆ ಆದ್ಯತೆ ನೀಡಿ
ಕನ್ನಡ ಚಲನಚಿತ್ರ ಲೋಕದಲ್ಲಿ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಕೊಡುಗೆಯ ಬಗ್ಗೆ ಇಡೀ ಕರುನಾಡಿನ ಮನೆಮನಗಳೂ ಮಾತನಾಡುತ್ತವೆ. ಎಲ್ಲರ ಮನೆಮಾತಾದ ಅಂತಹ ಅದ್ಭುತ ನಟಶ್ರೇಷ್ಠರಿಗೆ ಸೂಕ್ತ ಗೌರವ ನೀಡಲಾಗದ, ಅವರ ಸಮಾಧಿಸ್ಥಳವನ್ನು ಉಳಿಸಿಕೊಳ್ಳಲಾಗದ ಸ್ಥಿತಿಗೆ ನಾವು ತಲುಪಿದ್ದೇವೆ ಎನ್ನುವುದು ನಿಜಕ್ಕೂ ಬೇಸರದ ಸಂಗತಿ.
ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ. ವಿಷ್ಣುವರ್ಧನ್ ರವರ ಸ್ಮಾರಕ, ಕನ್ನಡಾಭಿಮಾನಿಗಳ ಹೃದಯದಲ್ಲಿ ಭಾವನಾತ್ಮಕ ಪ್ರೇರಣೆಯ ಕೇಂದ್ರವಾಗಿದೆ. ಆದರೆ ಇತ್ತೀಚೆಗೆ, ಸ್ಮಾರಕ ಇರುವ ಜಾಗವನ್ನು ಕೆಲವರು ತಮ್ಮ ಹಕ್ಕು ಭೂಮಿಯೆಂದು ಹೇಳಿಕೊಂಡು ರಾತ್ರೋರಾತ್ರಿ ಕೆಡವಿ, ಅಸಂಖ್ಯಾತ ಅಭಿಮಾನಿಗಳಿಗೂ ಹಾಗೂ ವಿಷ್ಣುವರ್ಧನ್ ಅವರ ಅಪೂರ್ವ ಸಾಧನೆಗಳಿಗೂ ಅನ್ಯಾಯ ಮಾಡಿರುವುದು ಅತ್ಯಂತ ನೋವುಂಟುಮಾಡಿದೆ.
ಈ ನಿಟ್ಟಿನಲ್ಲಿ, ಡಾ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೂಡಲೇ ಜಾಗದ ಮಾಲೀಕರಿಂದ ಸ್ವಾಧೀನಪಡಿಸಿಕೊಂಡು, ಅವರಿಗೂ ಸರ್ಕಾರಿ ನಿಯಮಾನುಸಾರ ನ್ಯಾಯಸಮ್ಮತ ಪರಿಹಾರ ನೀಡುವುದಲ್ಲದೇ, ಸ್ಮಾರಕವನ್ನು ರಾಷ್ಟ್ರಮಟ್ಟದ ಪ್ರವಾಸಿ ಕೇಂದ್ರವಾಗಿ, ಕಲೆ-ಸಂಸ್ಕೃತಿಯ ಪ್ರತೀಕವಾಗುವಂತಹ ಕಲಾಗ್ರಾಮವಾಗಿ ಅಭಿವೃದ್ಧಿಪಡಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಒತ್ತಾಯಿಸಿದ್ದೇನೆ ಎಂದು ಬರೆದಿದ್ದಾರೆ.
ಕನ್ನಡ ನಾಡಿನ ಕಲೆ, ಸಂಸ್ಕ್ರತಿಗಳ ಉಳಿವಿಗೆ ಕೊಡುಗೆ ನೀಡಿದ ಪ್ರತಿಯೊಬ್ಬ ಕಲಾವಿದನ ಘನತೆ-ಗೌರವ ಕಾಪಾಡುವುದು ಕನ್ನಡಿಗರ ಕರ್ತವ್ಯವಾಗಿದ್ದು, ಜನಪ್ರತಿನಿಧಿಯಾಗಿ ಸದಾ ಈ ನಿಲುವಿಗೆ ನಾವು ಬದ್ಧರಾಗಿದ್ದೇನೆ ಎಂದಿದ್ದಾರೆ.