

ಶಿವಮೊಗ್ಗ: ನಾವು ಸೇವಿಸುವ ಗಾಳಿ, ನೀರು, ಆಹಾರ ಎಲ್ಲವೂ ಕಲುಷಿತಗೊಳ್ಳುತ್ತಿದ್ದು, ಪರಿಸರವನ್ನು ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ. ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ವಿಲೇವಾರಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿದೇರ್ಶಕ ಡಾ. ಧನಂಜಯ ಸರ್ಜಿ ಹೇಳಿದರು.
ಆಲ್ಕೊಳದ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸೊಸೈಟಿ, ಸರ್ಜಿ ಸಮೂಹ ಆಸ್ಪತ್ರೆ ಸಹಯೋಗದಲ್ಲಿ ಶುಕ್ರವಾರ ಅನುಪಿನಕಟ್ಟೆಯ ಘನ ತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ಹಮ್ಮಿಕೊಂಡಿದ್ದ ಒಂದು ಸಾವಿರ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನೀರು, ನೈಸರ್ಗಿಕ ಗಾಳಿ, ಬೆಳಕು, ರಕ್ತವನ್ನು ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಬೇಕಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಬೇಕಿದೆ. ಬಳಸಿ ಭೂಮಿಗೆಸೆಯುವ ಪ್ಲಾಸ್ಟಿಕ್ 200 ವರ್ಷವಾದರೂ ಕೊಳೆಯುವುದಿಲ್ಲ, ಬಳಿಕ ಅದು ಗಾಳಿ, ನೀರು ಹಾಗೂ ಆಹಾರದ ಮೂಲಕ ದೇಹವನ್ನು ಸೇರುತ್ತಿದೆ ಎಂದರು.
ಶಿವಮೊಗ್ಗ ಮಲ್ಟಿ ಪರ್ಪಸ್ ಸೋಷಿಯಲ್ ಸೊಸೈಟಿ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಷನ್ ಪಿಂಟೋ ಮಾತನಾಡಿ, ನಮ್ಮ ಸಂಸ್ಥೆಯ ಸಂಸ್ಥಾಪನಾ ದಿನದ ಅಂಗವಾಗಿ ನಗರದೆಲ್ಲೆಡೆ ಹಣ್ಣಿನ ಗಿಡ ಹಾಗೂ ಇತರೆ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಕೀಲ ಕೆ.ಪಿ.ಶ್ರೀಪಾಲ್, ಬೆಂಗಳೂರು ಕ್ರಾಸ್ ಸಂಸ್ಥೆಯ ಮಹಿಳಾ ಸಬಲೀಕರಣ ಯೋಜನೆಯ ಸಿಸ್ಟರ್ ನ್ಯಾನರಸಿ ಇತರರಿದ್ದರು.