ಬಂಧಿಸುವ ಮುನ್ನ ಆರೋಪಿಗಳ ಸ್ನಾನ ಕಡ್ಡಾಯ: ಪೊಲೀಸರಿಗೆ ಕಮಿಷನರ್ ಕಟ್ಟಪ್ಪಣೆ

bhaskar rao
Published on

ಬೆಂಗಳೂರು: ಕರೊನಾ ವೈರಸ್​ ಭೀತಿಯಿಂದ ಯಾರೂ ಹೊರತಾಗಿಲ್ಲ. ಎಲ್ಲಿ, ಯಾವಾಗ, ಹೇಗೆ ಬೇಕಾದರೂ ಈ ವೈರಸ್​ ದೇಹದೊಳಕ್ಕೆ ಪ್ರವೇಶಿಸಿಬಿಡುತ್ತದೆ.

ಇದಾಗಲೇ ಹಲವಾರು ಪೊಲೀಸರು ಕೂಡ ಕರೊನಾ ಸೋಂಕಿಗೆ ಒಳಗಾಗಿದ್ದು, ಇದಾಗಲೇ ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರನ್ನು ಬಂಧಿಸುವ ಸಮಯದಲ್ಲಿ ಆರೋಪಿಗಳಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚು.

ಇದೇ ಕಾರಣಕ್ಕೆ, ಪೊಲೀಸ್​ ಕಮಿಷನರ್​ ಕಟ್ಟಪ್ಪಣೆ ಹೊರಡಿಸಿದ್ದಾರೆ. ಅದೇನೆಂದರೆ ಯಾವುದೇ ಆರೋಪಿಯನ್ನು ಬಂಧಿಸುವ ಮುನ್ನ ಇನ್ನುಮುಂದೆ ಅವರು ಸ್ನಾನ ಮಾಡುವುದು ಕಡ್ಡಾಯವಾಗಿದೆ. ಅಷ್ಟೇ ಅಲ್ಲದೇ ಆರೋಪಿಗಳನ್ನು ಬಂಧಿಸುವ ಮುನ್ನ ಅವರು ಬಟ್ಟೆಗಳನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಪೊಲೀಸರು ಖಚಿತಪಡಿಸಿಕೊಳ್ಳಬೇಕು ಎಂದು ಪೊಲೀಸ್​ ಕಮಿಷನರ್​ ಭಾಸ್ಕರ್​ ರಾವ್​ ಆದೇಶಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪೊಲೀಸ್ ಠಾಣೆ ಅಥವಾ ಕೋರ್ಟ್​ಗೆ ಹಾಜರು ಪಡಿಸುವ ಮುನ್ನ ಅವರು ಕಡ್ಡಾಯವಾಗಿ ಸ್ನಾನ ಮಾಡಿ ಬಟ್ಟೆ ಬದಲಾಯಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಎಲ್ಲಾ ಸಂದರ್ಭಗಳಲ್ಲಿ ಆರೋಪಿಗಳನ್ನು ಸ್ನಾನ ಮಾಡಿಸಿ ಠಾಣೆಗೆ ಕರೆತರುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ಒಂದು ವೇಳೆ ಮನೆಯಲ್ಲಿ ಬಂಧಿಸಿದ್ದರೆ, ಅಲ್ಲಿಯೇ ಅವರಿಗೆ ಸ್ನಾನ ಮಾಡಿ ಬಟ್ಟೆ ಬದಲಾಯಿಸಲು ಹೇಳಬೇಕು. ಸಾಧ್ಯವಾದರೆ ಹತ್ತಿರದಲ್ಲಿಯೇ ಇರುವ ಪಬ್ಲಿಕ್​ ಬಾತ್​ರೂಂಗೆ ಕರೆದುಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಠಾಣೆಗೆ ಅವರನ್ನು ಒಯ್ಯುವ ಮುನ್ನ ಇವು ಆಗಲೇಬೇಕು ಎಂದು ಹೇಳಿದ್ದಾರೆ.

ಇದರ ಜತೆಗೆ, ಆರೋಪಿಗಳ ಕರೊನಾ ಪರೀಕ್ಷೆ ಮಾಡಿಸಬೇಕು ಹಾಗೂ ಅವರನ್ನು ಸಂಪೂರ್ಣವಾಗಿ ಸ್ಯಾನಿಟೈಸರ್​ ಮಾಡಿದ ಬಳಿಕ ಠಾಣೆಗೆ ಕರೆದುಕೊಂಡು ಹೋಗಬೇಕು ಎಂದು ಅವರು ಸೂಚಿಸಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು 16 ಸಾವಿರ ಮಂದಿ ಪೊಲೀಸ್​ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ 38 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಸೋಂಕಿತರ ಸಂಖ್ಯೆ ಏರುತ್ತಲೇ ಇರುವ ಕಾರಣದಿಂದ ಇಂಥದ್ದೊಂದು ಕಟ್ಟುನಿಟ್ಟನ ಆದೇಶವನ್ನು ಹೊರಡಿಸಲಾಗಿದೆ.

ಇಬ್ಬರು ಪೊಲೀಸರು ಸೋಂಕಿನಿಂದ ಮೃಪಟ್ಟಿದ್ದಾರೆ. ಇವರ ಸಂಪರ್ಕಕ್ಕೆ ಬಂದಿರುವ 350 ಮಂದಿ ಪೊಲೀಸ್​ ಸಿಬ್ಬಂದಿಯನ್ನು ಕ್ವಾರಂಟೈನ್​ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಇಂಥದ್ದೊಂದು ಕಟ್ಟುನಿಟ್ಟಿನ ಆದೇಶ ಹೊರಬಿದ್ದಿದೆ.

d

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net