ಛತ್ತೀಸ್​ಗಢದಲ್ಲಿ ನಕ್ಸಲಿಸಂಗೆ ಭಾರೀ ಹಿನ್ನಡೆ: 110 ಮಹಿಳೆಯರು ಸೇರಿ 208 ನಕ್ಸಲರು ಪೊಲೀಸರ ಮುಂದೆ ಶರಣಾಗತಿ| Naxalism

ವಿಜಯವಾಣಿ (57)
Published on

Bastar: 2026ರ ಹೊತ್ತಿಗೆ ದೇಶವನ್ನು ನಕ್ಸಲಿಸಂ(Naxalism) ಮುಕ್ತವಾಗಿ ಮಾಡಬೇಕೆಂಬ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಭಾರಿ ಯಶಸ್ಸು ಸಿಕ್ಕಿದ್ದು, ಇಂದು(ಅ. 17) ಒಂದೇ ದಿನ ಛತ್ತೀಸ್​ಗಡದ ಬಸ್ತಾರ್ ಜಿಲ್ಲೆಯ ಜಗದಲ್ಪುರದಲ್ಲಿ 110 ಮಹಿಳೆಯರು ಸೇರಿ ಒಟ್ಟು 208 ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಜೊತೆಗೆ ಛತ್ತೀಸ್​ಗಢದಲ್ಲಿ ವ್ಯಾಪಿಸಿದ್ದ ನಕ್ಸಲಿಸಂಗೆ ಭಾರಿ ಹಿನ್ನಡೆಯಾಗಿದೆ.

ಹಿರಿಯ ನಕ್ಸಲ್ ನಾಯಕ ರೂಪೇಶ್ ನೇತೃತ್ವದಲ್ಲಿ ಜಗದಲ್ಪುರದ ರಿಸರ್ವ್ ಪೊಲೀಸ್ ಲೈನ್‌ನಲ್ಲಿ ಶರಣಾದ ನಕ್ಸಲರು ಎಕೆ-47 ರೈಫಲ್‌ಗಳು, ಐಎನ್‌ಎಸ್‌ಎಎಸ್ ಅಸಾಲ್ಟ್ ರೈಫಲ್‌ಗಳು, ಸೆಲ್ಫ್-ಲೋಡಿಂಗ್ ರೈಫಲ್ (ಎಸ್‌ಎಲ್‌ಆರ್), ಬ್ಯಾರೆಲ್ ಗ್ರೆನೇಡ್ ಲಾಂಚರ್ (ಬಿಜಿಎಲ್) ಸೇರಿದಂತೆ ಒಟ್ಟು 153 ಶಸ್ತ್ರಾಸ್ತ್ರಗಳನ್ನು ನೀಡಿದ್ದಾರೆ.

208 ನಕ್ಸಲರು ಬಸ್​ಗಳಲ್ಲಿ ಬಂದಿಳಿದಿದ್ದು, ಪೊಲೀಸ್ ಅಧಿಕಾರಿಗಳು ಸಾಂಕೇತಿಕವಾಗಿ ಅವರಿಗೆ ರೆಡ್​ಕಾರ್ಪೆಟ್​ನ ಸ್ವಾಗತ ನೀಡಿ, ಪ್ರತಿಯೊಬ್ಬರಿಗೂ ಭಾರತೀಯ ಸಂವಿಧಾನದ ಪ್ರತಿ ಮತ್ತು ವೇದಿಕೆಯ ಮೇಲೆ ಗುಲಾಬಿಯನ್ನು ನೀಡಿ ಮುಖ್ಯವಾಹಿನಿಗೆ ಬರಮಾಡಿಕೊಂಡಿದ್ದಾರೆ. ಛತ್ತೀಸ್​ಗಢ ಸಿಎಂ ವಿಷ್ಣು ದೇವ್ ಸಾಯಿ ಮುಂದೆ ನಕ್ಸಲರ ಶರಣಾತಿಯನ್ನು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಗೆ ಸಿಎಂ ವೇಳಾಪಟ್ಟಿ ರದ್ದಾಗಿದ್ದು ಅಧಿಕಾರಿಗಳು ಸ್ವಾಗತಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಸರ್ಕಾರದ ಸಮಗ್ರ ನಕ್ಸಲೀಯ ನಿರ್ಮೂಲನಾ ನೀತಿಯಿಂದಾಗಿ ಹಿರಿಯ ನಕ್ಸಲ್ ನಾಯಕರು ಸೇರಿದಂತೆ ದಂಡಕಾರಣ್ಯ ಪ್ರದೇಶದ 208 ಕಾರ್ಯಕರ್ತರು ಹಿಂಸಾಚಾರದ ಮಾರ್ಗವನ್ನು ತ್ಯಜಿಸಿ ಸಾಮಾಜಿಕ ಮುಖ್ಯವಾಹಿನಿಗೆ ಮರಳಿದ್ದಾರೆ. ಈ ನಿರ್ಣಾಯಕ ಮತ್ತು ಮಹತ್ವದ ಬೆಳವಣಿಗೆ ಸರ್ಕಾರದ ಮಾರ್ಗದರ್ಶನದಲ್ಲಿ ಪೊಲೀಸರು, ಭದ್ರತಾ ಪಡೆಗಳು, ಸ್ಥಳೀಯ ಆಡಳಿತ ಮತ್ತು ಜಾಗೃತ ಸಮಾಜದ ನಿರಂತರ ಮತ್ತು ಪ್ರಾಮಾಣಿಕ ಪ್ರಯತ್ನಗಳ ಫಲಿತಾಂಶವಾಗಿದೆ. ಶಾಂತಿ, ಸಂವಾದ ಹಾಗೂ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ನಿರಂತರ ಪ್ರಯತ್ನಗಳು ಅನೇಕ ನಕ್ಸಲ್ ಕಾರ್ಯಕರ್ತರಿಗೆ ಗೌರವಾನ್ವಿತ ಮತ್ತು ಸಾಮರಸ್ಯದ ಜೀವನವನ್ನು ನಡೆಸಲು ಸ್ಫೂರ್ತಿ ನೀಡಿವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net