Brahmaputra Apartment | ರಾಜ್ಯಸಭಾ ಸಂಸದರು ವಾಸಿಸುವ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

Brahmaputra Apartment
Published on

ನವದೆಹಲಿ: ದೆಹಲಿಯ ಬಿಡಿ ಮಾರ್ಗದಲ್ಲಿರುವ ಬಹುಮಹಡಿ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ನಲ್ಲಿ(Brahmaputra Apartment) ಶನಿವಾರ (ಅಕ್ಟೋಬರ್​,18) ಭಾರಿ ಬೆಂಕಿ ಅವಘಡ ಸಂಭವಿಸಿದೆ. ಅಲ್ಲದೆ, 2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಈ ಕಟ್ಟಡದಲ್ಲಿ ಹಲವಾರು ಲೋಕಸಭಾ ಮತ್ತು ರಾಜ್ಯಸಭಾ ಸಂಸದರು ವಾಸಿಸುತ್ತಿದ್ದಾರೆ.

ಬ್ರಹ್ಮಪುತ್ರ ಅಪಾರ್ಟ್‌ಮೆಂಟ್‌ನಲ್ಲಿ ಹಲವಾರು ಸಂಸದರ ಫ್ಲಾಟ್‌ಗಳಿವೆ. ದೆಹಲಿ ಅಗ್ನಿಶಾಮಕ ಸೇವೆಗಳ ಪ್ರಕಾರ, ಇಂದು ಮಧ್ಯಾಹ್ನ 1.22 ರ ಸುಮಾರಿಗೆ ಬೆಂಕಿ ಅವಘಡದ ಬಗ್ಗೆ ಮಾಹಿತಿ ಬಂದ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಲವಾರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಅಗ್ನಿಶಾಮಕ ಸೇವೆಯ ಎಡಿಒ ಭೂಪೇಂದರ್, ಟಿಟಿಎಲ್ ಸೇರಿದಂತೆ 14 ವಾಹನಗಳನ್ನು ನಾವು ತಕ್ಷಣ ಸ್ಥಳಕ್ಕೆ ಕಳುಹಿಸಿದ್ದೇವೆ. ಏಕೆಂದರೆ, ಇದು ಬಹುಮಹಡಿ ಕಟ್ಟಡವಾಗಿದೆ. ಇಲ್ಲಿಯವರೆಗೆ, ಹೆಚ್ಚಿನ ಹಾನಿ ಸ್ಟಿಲ್ಟ್ ಮಹಡಿಯಲ್ಲಿ ಮತ್ತು ಮೇಲಿನ ಮಹಡಿಗಳು ಹಾನಿಗೊಳಗಾಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಆದರೆ ನಮ್ಮ ಕೆಲಸ ಇನ್ನೂ ಮುಂದುವರೆದಿದೆ ಎಂದು ತಿಳಿಸಿದ್ದಾರೆಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಸಂಸತ್ತಿನಿಂದ ಕೇವಲ 200 ಮೀಟರ್ ದೂರದಲ್ಲಿರುವ ಅಪಾರ್ಟ್‌ಮೆಂಟ್

ಈ ಬೆಂಕಿ ಅವಘಡದ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ, ದೆಹಲಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದು, ಅಗ್ನಿಶಾಮಕ ದಳವು ಕರೆಗೆ ತಕ್ಷಣ ಸ್ಪಂದಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ಎಲ್ಲಾ ನಿವಾಸಿಗಳು ರಾಜ್ಯಸಭಾ ಸದಸ್ಯರು. ಕಟ್ಟಡವು ಸಂಸತ್ತಿನಿಂದ 200 ಮೀಟರ್ ದೂರದಲ್ಲಿದೆ. ಬೆಂಕಿ ಅವಘಡ ಸಂಭವಿಸಿದ 30 ನಿಮಿಷಗಳಿಂದಲೂ ಅಗ್ನಿಶಾಮಕ ದಳವಿಲ್ಲ. ಬೆಂಕಿ ಇನ್ನೂ ಉರಿಯುತ್ತಿದೆ ಮತ್ತು ಏರುತ್ತಿದೆ. ಪದೇ ಪದೇ ಕರೆ ಮಾಡಿದರೂ ಅಗ್ನಿಶಾಮಕ ವಾಹನಗಳು ಕಾಣೆಯಾಗಿವೆ. ದೆಹಲಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸಾಕೇತ್ ಗೋಖಲೆ ಕಿಡಿಕಾರಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net