

ನಿಯಮಗಳ ಬದಲಾವಣೆ, ಇತರ ಕಾರಣಗಳಿಗಾಗಿ ಜೂ. 1ರಿಂದ ಪ್ರಮುಖ ಹಣಕಾಸು ವಿಚಾರಗಳಲ್ಲಿ ಹಲವು ಬದಲಾವಣೆಗಳಾಗಲಿವೆ. ಅದರಲ್ಲೂ ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರುವ ಅಡುಗೆ ಅನಿಲ ದರ ಪರಿಷ್ಕರಣೆ, ಆರ್ಬಿಐ ವಿಶೇಷ ಅಭಿಯಾನ, ಇವಿ ಸಬ್ಸಿಡಿ ಕಡಿತ ಇತ್ಯಾದಿ ಜಾರಿಗೆ ಬರಲಿವೆ.
ಬ್ಯಾಂಕ್ ಖಾತೆಯಲ್ಲಿನ ಕ್ಲೇಮ್ ಮಾಡದ ಮೊತ್ತದ ಇತ್ಯರ್ಥಕ್ಕಾಗಿ ಆರ್ಬಿಐ ಜೂನ್ 1ರಿಂದ ‘100 ದಿನ 100 ಪೇ’ ಎಂಬ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ನೂರು ದಿನಗಳಲ್ಲಿ 100 ಕ್ಲೇಮ್ ಮಾಡದ ಮೊತ್ತವನ್ನು ಅದರ ವಾರಸುದಾರರಿಗೆ ನೀಡಲಿದೆ. ಈ ಕುರಿತು ಎಲ್ಲ ಬ್ಯಾಂಕ್ಗಳಿಗೆ ಆರ್ಬಿಐ ಸುತ್ತೋಲೆ ಕಳುಹಿಸಿದೆ.
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಗ್ಗಿದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ದರ ಜೂನ್ನಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ. ಸಾಂದ್ರೀಕೃತ ಅನಿಲ (ಸಿಎನ್ಜಿ) ದರ ಕೂಡ ಇಳಿಕೆಯಾಗುವ ನಿರೀಕ್ಷೆ ಇದೆ. ಕೊಳವೆ ಮೂಲಕ ಪೂರೈಕೆಯಾಗುವ ಅನಿಲ (ಪಿಎನ್ಜಿ) ದರವೂ ಕಡಿಮೆಯಾಗುವ ಸಂಭವ ಇದೆ.
ವಿದೇಶಗಳಿಗೆ ರಫ್ತಾಗು ಕೆಮ್ಮು ನಿವಾರಣೆಗೆ ಬಳಸುವ ಸಿರಪ್ಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಬೇಕೆಂದು ವಿದೇಶಿ ವ್ಯಾಪಾರ ಮಹಾನಿರ್ದೇಶ ನಾಲಯದ ಆದೇಶ ತಿಳಿಸಿದೆ. ಗಾಂಬೀಯಾ, ಉಜ್ಬೇಕಿಸ್ತಾನದಲ್ಲಿ ಸಂಭವಿಸಿದ ಮಕ್ಕಳ ಸಾವು ಪ್ರಕರಣಗಳಿಗೆ ಭಾರತೀಯ ಫಾರ್ವ ಕಂಪನಿಗಳು ತಯಾರಿಸಿದ ಕೆಮ್ಮಿನ ಔಷಧ ಕಾರಣ ಎಂಬ ಆರೋಪ ಕೇಳಿಬಂದ ಹಿನ್ನೆಲೆಈ ಕ್ರಮ ಕೈಗೊಂಡಿದೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (ಇವಿ) ಸಬ್ಸಿಡಿಯನ್ನು ಶೇ.40ರಿಂದ ಶೇ.15ಕ್ಕೆ ಇಳಿಸಲಾಗಿದೆ. ಹೀಗಾಗಿ ದ್ವಿಚಕ್ರ ಇವಿ ದರ 20 ಸಾವಿರ ರೂ.ನಿಂದ 30 ಸಾವಿರ ರೂ.ವರೆಗೆ ಹೆಚ್ಚಾಗಬಹುದು.
ಆಧಾರ್-ಪ್ಯಾನ್ ಜೋಡಣೆ: ಆಧಾರ್ ಸಂಖ್ಯೆ ಪ್ಯಾನ್ ಸಂಖ್ಯೆಯನ್ನು ಜೋಡಿಸುವ ಕಾರ್ಯವನ್ನು ಜೂನ್ 30ರೊಳಗೆ ಪೂರೈಸಬೇಕು. ಇಲ್ಲದಿದ್ದರೆ ಪ್ಯಾನ್ ನಿಷ್ಕ್ರಿಯವಾಗುವ ಸಾಧ್ಯತೆ ಇದೆ. ಆಧಾರ್- ಪ್ಯಾನ್ ಜೋಡಣೆಗೆ ಕೇಂದ್ರ ಸರ್ಕಾರ ಎರಡು ವರ್ಷದಿಂದ ಗಡುವು ವಿಸ್ತರಣೆ ಮಾಡುತ್ತಿದೆ. ಕಳೆದ ಸಾರಿ ಮಾರ್ಚ್ 31ಕ್ಕೆ ಇದ್ದ ಗಡುವನ್ನು ಮೂರು ತಿಂಗಳು ವಿಸ್ತರಿಸಿತ್ತು.
ಪಿಎಫ್ ಅಧಿಕ ಪಿಂಚಣಿ ಅರ್ಜಿ: ಕಾರ್ವಿುಕರ ಭವಿಷ್ಯ ನಿಧಿ ಸಂಸ್ಥೆಯಿಂದ (ಇಪಿಎಫ್ಒ) ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ಹೆಚ್ಚಿನ ನಿವೃತ್ತಿ ವೇತನ ಪಡೆಯಲು ಬಯಸುವ ನೌಕರರು, ಜೂನ್ 26ರೊಳಗೆ ಅರ್ಜಿ ಸಲ್ಲಿಸಬೇಕು.
ಆಧಾರ್ ಕಾರ್ಡ್ ನವೀಕರಣ: ಹತ್ತು ವರ್ಷದ ಹಿಂದೆ ಆಧಾರ್ ಕಾರ್ಡ್ ಪಡೆದವರ ಗುರುತು ಮತ್ತು ವಿಳಾಸದ ದೃಢೀಕರಣದ ಮಾಹಿತಿಯನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಪಡೆಯುತ್ತಿದ್ದು, ಆನ್ಲೈನ್ ಮೂಲಕ ಉಚಿತವಾಗಿ ಈ ವಿವರ ಸಲ್ಲಿಸಿ ಆಧಾರ್ ಅಪ್ಡೇಟ್ ಮಾಡಲು ಜೂನ್ 14ರವರೆಗೆ ಅವಕಾಶ ಇದೆ. ಆಧಾರ್ ಕೇಂದ್ರಗಳಲ್ಲಿ ಈ ಸೇವೆಯನ್ನು 50 ರೂ. ಶುಲ್ಕ ಪಾವತಿಸಿಯೂ ಮಾಡಿಸಬಹುದು.
ಬ್ಯಾಂಕ್ ಲಾಕರ್ ಒಪ್ಪಂದದ ಗಡುವು: ಬ್ಯಾಂಕ್ಗಳಲ್ಲಿ ಗ್ರಾಹಕರು ಪಡೆಯುವ ಸುರಕ್ಷತಾ ಲಾಕರ್ಗೆ ಸಂಬಂಧಿಸಿದ ಒಪ್ಪಂದದ ಗಡುವನ್ನು ಆರ್ಬಿಐ ಈ ವರ್ಷಾಂತ್ಯದವರೆಗೆ ವಿಸ್ತರಿಸಿದೆ. ಈ ಇದಕ್ಕೆ ಸಂಬಂಧಿಸಿ ಶೇ.50ರಷ್ಟು ಪ್ರಕ್ರಿಯೆಯನ್ನು ಜೂನ್ 30ರೊಳಗೆ, ಶೇ.75 ಕಾರ್ಯವನ್ನು ಸೆಪ್ಟೆಂಬರ್ 30ರೊಳಗೆ ಮುಗಿಸಲು ಸೂಚಿಸಿದೆ.
ಇಂಡಿಯನ್ ಬ್ಯಾಂಕ್ ವಿಶೇಷ ಠೇವಣಿ: ಇಂಡಿಯನ್ ಬ್ಯಾಂಕ್ ಆರಂಭಿಸಿರುವ ‘ಇಂಡ್ ಸೂಪರ್ 400 ಡೇಸ್’ ವಿಶೇಷ ಠೇವಣಿ ಅಭಿಯಾನ ಜೂನ್ 30ಕ್ಕೆ ಕೊನೆಯಾಗಲಿದೆ. ಈ ಯೋಜನೆಯಲ್ಲಿ ಠೇವಣಿ ಇರಿಸುವವರಿಗೆ ಶೇ.7.25, ಹಿರಿಯ ನಾಗರಿಕರಿಗೆ ಶೇ.7.75 ಮತ್ತು ಅತಿ ಹಿರಿಯ ನಾಗರಿಕರಿಗೆ ಶೇ.8ರ ದರದ ಬಡ್ಡಿ ದೊರೆಯಲಿದೆ.
ಎಸ್ಬಿಐ ಅಮೃತ ಕಲಶ ಯೋಜನೆ: ಎಸ್ಬಿಐ ಆರಂಭಿಸಿರುವ ಅಮೃತ ಕಲಶ ಯೋಜನೆಯ ಸೌಲಭ್ಯ ಪಡೆಯುವ ಗಡುವು ಜೂನ್ 30ಕ್ಕೆ ಮುಗಿಯಲಿದೆ. 400 ದಿನ ನಿಶ್ಚಿತ ಠೇವಣಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಶೇ.7.10 ಮತ್ತು ಹಿರಿಯ ನಾಗರಿಕರಿಗೆ ಶೇ. 7.60ರ ದರದ ಬಡ್ಡಿ ದೊರೆಯಲಿದೆ.