

ಹಾವೇರಿ: ಕೆಂಪು ರೋಗಕ್ಕೆ ತುತ್ತಾದ ಮೆಕ್ಕೆಜೋಳ ಬೆಳೆಯನ್ನು ನಾಲ್ವರು ರೈತರು ಟ್ರಾೃಕ್ಟರ್‌ನ ರೂಟರ್‌ನಿಂದ ಹರಗಿ ನಾಶಪಡಿಸಿದ ಘಟನೆ ತಾಲೂಕಿನ ಹಿರೇಚಿಕ್ಕಲಿಂಗದಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಪ್ರಕಾಶ ಕಂಬಳಿ ಎಂಬುವರು 3.20 ಎಕರೆ, ನಾಗಪ್ಪ ನೆಟಗಲ್ಲಣ್ಣನವರ 3.27 ಎಕರೆ, ಹನುಮಂತಪ್ಪ ಪಿಚ್ಚಿ 10 ಎಕರೆ ಹಾಗೂ ಫಕ್ಕೀರೇಶ ಲಿಂಗಮ್ಮನವರ 8 ಎಕರೆ ಸೇರಿ ಒಟ್ಟು 24.47 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ನಾಶಪಡಿಸಿದ್ದಾರೆ.
ರೈತರು ಎಕರೆಗೆ 15ರಿಂದ 20ಸಾವಿರ ರೂ.ನಷ್ಟು ಹಣ ಖರ್ಚು ಮಾಡಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆದರೆ, ಸರಿಯಾಗಿ ಮಳೆ ಬರದ ಕಾರಣ ಮೊಣಕಾಲೊರೆಗೂ ಬೆಳೆದಿದ್ದ ಮೆಕ್ಕೆಜೋಳಕ್ಕೆ ಕೆಂಪು ರೋಗ ಕಾಣಿಸಿಕೊಂಡಿತ್ತು. ಅಲ್ಲದೆ ಬೆಳೆಯು ಒಣಗಲು ಆರಂಭಿಸಿತ್ತು. ಇದರಿಂದ ಬೇಸತ್ತು ರೈತರು ಟ್ರಾೃಕ್ಟರ್‌ನ ರೂಟರ್‌ನಿಂದ ಬೆಳೆ ಹರಗಿ ನಾಶಪಡಿಸಿದರು.
ಬರಪೀಡಿತವೆಂದು ಘೋಷಿಸಲು ಆಗ್ರಹ…
ತಾಲೂಕಿನಲ್ಲಿ ಮಳೆ ಸಂಪೂರ್ಣ ಮಾಯವಾಗಿ ಹೋಗಿದೆ. ಬೆಳೆಗಳು ಒಣಗಿ ಹಾಳಾಗುತ್ತಿವೆ. ನದಿಗಳನ್ನು ನೀರಿನ ಹರಿವು ಕಡಿಮೆಯಾಗಿದೆ. ಕೆರೆಗಳಿಂದಲೂ ನೀರು ಕಡಿಮೆಯಾಗುತ್ತಿದೆ. ಆದ್ದರಿಂದ ಬೆಳೆಗಳಿಗೆ ಸರಿಯಾಗಿ ನೀರು ಸಹ ದೊರೆಯುತ್ತಿಲ್ಲ. ಮಳೆಯಾಶ್ರಿತ ಬೆಳೆಗಳು ಸಂಪೂರ್ಣ ಒಣಗಿ ಹಾಳಾಗಿ ಹೋಗಿವೆ.
ನೀರಾವರಿ ಬೆಳೆಗಳಿಗೂ ಸರಿಯಾಗಿ ನೀರು ದೊರೆಯದ ಕಾರಣ ಅವು ಕೂಡ ಒಣಗಲು ಶುರು ಮಾಡಿವೆ. ಆದರೆ, ಬ್ಯಾಂಕ್‌ನವರಿಂದ ಮಾತ್ರ ಸಾಲ ತುಂಬುವಂತೆ ನೋಟಿಸ್ ಬರುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಎಲ್ಲ ರೈತರ ಸಾಲಮನ್ನಾ ಮಾಡಬೇಕು ಎಂದು ಬೆಳೆ ನಾಶಪಡಿಸಿದ ರೈತರು ಆಗ್ರಹಿಸಿದ್ದಾರೆ.