

ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೆ ಯಾವುದೇ ಚುನಾವಣೆ ನಡೆದರೂ, ಮತದಾನ ಕೇಂದ್ರಗಳ ಮೇಲೆ ದಾಳಿ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರ ಮೇಲೆ ದಾಳಿ, ಪ್ರಚಾರದ ಸಂದರ್ಭದಲ್ಲಿ ಹಿಂಸಾಚಾರ, ಇವೆಲ್ಲ ಪಶ್ಚಿಮ ಬಂಗಾಳದಲ್ಲಿ ತಪ್ಪದೇ ನಡೆಯುತ್ತಿದ್ದು, ಅಲ್ಲಿನ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ. ರಾಜಕೀಯ ಹಿಂಸಾಚಾರದಿಂದ ಕುಖ್ಯಾತಿಯಾಗಿರುವ ಈ ರಾಜ್ಯದಲ್ಲಿ ಪ್ರತಿಪಕ್ಷಗಳು ಮುಕ್ತವಾಗಿ ಪ್ರಚಾರ ನಡೆಸದಂಥ ಸ್ಥಿತಿ ಇದೆ. ಬೆದರಿಕೆ, ಹಲ್ಲೆ, ಮಾರಣಾಂತಿಕ ದಾಳಿ, ಹತ್ಯೆಯತ್ನ, ಕೊಲೆಗಳು ಇಲ್ಲಿ ಸಾಮಾನ್ಯ ಎಂಬಂತಾಗಿದೆ. ಪರಿಸ್ಥಿತಿ ಇಷ್ಟು ಹದಗೆಟ್ಟಿದ್ದರೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ, ಕೇಂದ್ರದೊಂದಿಗೆ ಕಾದಾಡುವುದರಲ್ಲೇ ಸಮಯ ವ್ಯರ್ಥ ಮಾಡುತ್ತಿದೆಯೇ ಹೊರತು, ತನ್ನಲ್ಲಿನ ಸ್ಥಿತಿಯನ್ನು ಸುಧಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ.
ಹಲವು ಅಹಿತಕರ ಘಟನೆಗಳ ಪಟ್ಟಿಗೆ ಶುಕ್ರವಾರ ಮತ್ತೊಂದು ಸೇರ್ಪಡೆಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ನಿಜಕ್ಕೂ ಕಾನೂನು- ಸುವ್ಯವಸ್ಥೆ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಉತ್ತರ 24 ಪರಗಣ ಜಿಲ್ಲೆಯಲ್ಲಿ ದುಷ್ಕರ್ವಿುಗಳು ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯ ಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿ ಖಂಡನೀಯ. ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿ ಮುಖಂಡ ಶೇಖ್ ಶಹಜಹಾನ್ ಮನೆಗೆ ತನಿಖೆಗೆ ತೆರಳುತ್ತಿದ್ದಾಗ ಇ.ಡಿ ಅಧಿಕಾರಿಗಳ ಕಾರಿನ ಮೇಲೆ ದಾಳಿ ನಡೆದಿದೆ. ರಾಜ್ಯದಲ್ಲಿ ತನಿಖಾ ಅಧಿಕಾರಿಗಳಿಗೇ ಭದ್ರತೆ ಇಲ್ಲವೆಂದಾದರೆ ಜನಸಾಮಾನ್ಯರ ಸ್ಥಿತಿ ಏನು? ಕೇಂದ್ರ ತನಿಖಾ ತಂಡದ ಅಧಿಕಾರಿಗಳಿಗೆ ಸೂಕ್ತ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ, ಈ ಜವಾಬ್ದಾರಿ ನಿರ್ವಹಣೆಯಲ್ಲೂ ಅಲ್ಲಿನ ಸರ್ಕಾರ ಎಡವಿದೆ. ಇದು ಬರೀ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲಿನ ದಾಳಿಯಲ್ಲ, ಬದಲಿಗೆ ಒಕ್ಕೂಟ ವ್ಯವಸ್ಥೆಯ ಮೇಲೆ ನಡೆದ ದಾಳಿಯಾಗಿದೆ. ರಾಜಕೀಯ ವೈಷಮ್ಯದ ಹಂತವನ್ನು ದಾಟಿ, ಈಗ ತನಿಖಾಧಿಕಾರಿಗಳು ಪ್ರಾಣಭೀತಿ ಎದುರಿಸುವಂತಾಗಿರುವುದು ದುರ್ದೈವಕರ. ಪದೇಪದೆ ಹಿಂಸಾಚಾರದ ಘಟನೆಗಳು ಮರುಕಳಿಸುತ್ತಿದ್ದರೂ ಮತ್ತು ಅದರಲ್ಲಿ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ, ನಾಯಕರ ಪಾತ್ರವಿದ್ದರೂ ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಇಡಿ ಅಧಿಕಾರಿಗಳ ಮೇಲಿನ ದಾಳಿಯ ಬಳಿಕ ಪ್ರತಿಪಕ್ಷಗಳು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ ಮಾಡಿವೆ.
ಮೇಲಿಂದ ಮೇಲೆ ರಾಜ್ಯ ಸರ್ಕಾರದ ವೈಫಲ್ಯ ಸಾಬೀತಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ರಾಷ್ಟ್ರಪತಿ ಆಳ್ವಿಕೆಯತ್ತ ವಾಲುತ್ತಿದೆಯೇ ಎಂಬ ಪ್ರಶ್ನೆ ಮೂಡದೆ ಇರಲು ಸಾಧ್ಯವಿಲ್ಲ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ‘ಪಶ್ಚಿಮ ಬಂಗಾಳದಲ್ಲೇ ಇಂಥ ಘಟನೆಗಳು ನಡೆಯುತ್ತಿರುವುದೇಕೆ ಎಂಬುದರ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುವುದು’ ಎಂದಿದೆ.
ಪಶ್ಚಿಮ ಬಂಗಾಳದಲ್ಲಿ 2010ರಿಂದ 2019ರ ಅವಧಿಯಲ್ಲಿ ರಾಜಕೀಯ ಕಾರಣಗಳಿಗೆ ನಡೆದ ಹತ್ಯೆಗಳು 161. 2020-23ರ ಅವಧಿಯಲ್ಲೂ ಹಿಂಸಾಚಾರದ ಪ್ರಕರಣಗಳು ಏರಿಕೆಯಾಗಿವೆ. ರಾಜ್ಯ ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಆತಂಕವಿದೆ. ಅದಕ್ಕೂ ಮುನ್ನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿ.