

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿರುವ ‘ಪರ್ಸೆಂಟೇಜ್’ ವಿವಾದದಿಂದ ಎಚ್ಚೆತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ, ಸರ್ಕಾರದವರೆಗೆ ವ್ಯಾಪಿಸಿರುವ ಕೆಲ ಸಚಿವರ ಪುತ್ರರು, ಬಂಧುಗಳ ‘ಪ್ರಭಾವಿ’ ಕೈಗಳ ಹಿಡಿತವನ್ನು ಸಡಿಲಿಸುವತ್ತ ಹೆಜ್ಜೆ ಇಟ್ಟಿದ್ದಾರೆ. ಈ ವಿಚಾರವಾಗಿ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ರಾಜ್ಯ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಶೇ.40 ಪರ್ಸೆಂಟೇಜ್ ಆರೋಪ ಮಾಡಿ ಪ್ರಧಾನಿಗೆ ಪತ್ರ ಬರೆದ ಬಳಿಕ ಕಾಂಗ್ರೆಸ್ ಈ ವಿಚಾರವನ್ನೇ ಅಸ್ತ್ರ ಮಾಡಿಕೊಂಡಿದೆ. ಇದರಿಂದ ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ ಕೆಟ್ಟ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಆದ್ದರಿಂದಲೇ ಬೊಮ್ಮಾಯಿ ತಲೆಕೆಡಿಸಿಕೊಂಡಿದ್ದಾರೆ. ಕೆಲ ಸಚಿವರ ಪುತ್ರರು, ಬಂಧುಗಳು, ಅಳಿಯಂದಿರು, ಸಹೋದರರು ಸರ್ಕಾರದ ಮಟ್ಟದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೆಲವರು ಪ್ರತ್ಯೇಕ ಕಚೇರಿಗಳನ್ನೇ ತೆರೆದು ಬಹಿರಂಗವಾಗಿ ವ್ಯವಹಾರಕ್ಕೆ ಇಳಿದಿರುವ ಆರೋಪಗಳು ರಾಜಕೀಯ ವಲಯದಲ್ಲಿ ವ್ಯಾಪಕವಾಗಿವೆ. ಚುನಾವಣೆಗೆ ಕೇವಲ ಒಂದು ವರ್ಷ ಇರುವ ಸಂದರ್ಭದಲ್ಲಿ ಇಂತಹ ಆರೋಪಗಳಿಗೆ ಕಡಿವಾಣ ಹಾಕುವ ಅನಿವಾರ್ಯತೆ ಸಿಎಂ ಹೆಗಲೇರಿದೆ.
ಹೈಕಮಾಂಡ್ ಗರಂ: ಕಾಮಗಾರಿಗಳಲ್ಲಿ ಮಾತ್ರವಲ್ಲದೆ ಮಠಗಳಿಗೆ ನೀಡುವ ಅನುದಾನ, ಜಾನುವಾರುಗಳ ಮೇವು ಹೀಗೆ ಎಲ್ಲ ಕಡೆಯಿಂದಲೂ ಪರ್ಸೆಂಟೇಜ್ ಆರೋಪ ಸುತ್ತಿಕೊಳ್ಳುತ್ತಿರುವುದು ಬಿಜೆಪಿ ವರಿಷ್ಠರಿಗೆ ತಲೆನೋವಿನ ಸಂಗತಿಯೇ ಆಗಿದೆ. ಯಾವಾಗ ಗುತ್ತಿಗೆದಾರರ ಸಂಘದ ಪತ್ರ ಪ್ರಧಾನಿ ಕಚೇರಿ ತಲುಪಿತೋ ಆಗ ಬಿಜೆಪಿ ವರಿಷ್ಠರು ಗರಂ ಆಗಿದ್ದಾರೆ. ಗುತ್ತಿಗೆದಾರರ ಸಂಘದ ಬಳಿ ಇರುವ ಸಾಕ್ಷಾ್ಯಧಾರಗಳೇನು ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಅವರಿಗೆ ಸಿಕ್ಕಿರುವ ಮಾಹಿತಿ ಬೆಚ್ಚಿ ಬೀಳಿಸಿದೆ.
ಕೆಲವೊಂದು ವಾಯ್್ಸ ರೆಕಾರ್ಡ್ ಜತೆಗೆ ಯಾವ ಸಚಿವರ ಪರವಾಗಿ ಯಾರು ವ್ಯವಹಾರಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ಸೇರಿ ಹಲವು ದಾಖಲೆಗಳು ಗುತ್ತಿಗೆದಾರರ ಬಳಿ ಇರುವ ವಿಷಯ ಹೈಕಮಾಂಡ್ಗೆ ಗೊತ್ತಾಗಿದೆ. ಈ ಮಾಹಿತಿ ಹೊರ ಬಂದರೆ ಕಷ್ಟ ಎಂಬುದು ಸ್ಪಷ್ಟವಾದ ನಂತರವೇ ಗುತ್ತಿಗೆದಾರರ ಸಂಘದ ಜತೆಗೆ ಮಾತುಕತೆ ನಡೆಸುವಂತೆ ವರಿಷ್ಠರು ಬೊಮ್ಮಾಯಿಗೆ ಸೂಚನೆ ನೀಡಿದ್ದರೆಂದು ಉನ್ನತ ಮೂಲಗಳು ಖಚಿತಪಡಿಸಿವೆ.
ಎಲೆಕ್ಷನ್ ಗೆಲ್ಲಲು ಎಷ್ಟು ಬೇಕು?: ಇಂದಿನ ಚುನಾವಣೆಗಳು ದುಡ್ಡಿನ ಮೇಲೆ ನಡೆಯುತ್ತವೆ ನಿಜ, ಆದರೆ ಚುನಾವಣೆ ಗೆಲ್ಲಲು ಎಷ್ಟು ಬೇಕಾಗುತ್ತದೆ. ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ 10-12 ಕೋಟಿ ರೂ.ಗಳು ಸಹ ಖರ್ಚಾಗುವುದಿಲ್ಲ. ಆದರೆ ಮಿತಿ ಮೀರಿ ಭ್ರಷ್ಟಾಚಾರದಲ್ಲಿ ತೊಡಗುವ ಅಗತ್ಯವಿಲ್ಲ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿರುತ್ತದೆ, ಎಚ್ಚರ ಎಂದು ಸಿಇಂ ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ನಿವೃತ್ತ ಅಧಿಕಾರಿಗಳ ಬಳಕೆ: ಒಂದಿಬ್ಬರು ಸಚಿವರು ನಿವೃತ್ತ ಅಧಿಕಾರಿ ಗಳನ್ನು ಬಳಸಿಕೊಳ್ಳುತ್ತಿರುವ ಮಾಹಿತಿಯೂ ಲಭ್ಯವಾಗಿದ್ದು, ಆ ಬಗ್ಗೆಯೂ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.
ಎಚ್ಚರಿಕೆಯಿಂದಿರಿ: ಸಚಿವರೊಬ್ಬರ ಸಂಬಂಧಿ ಮುಖ್ಯಮಂತ್ರಿ ಮನೆಗೆ ಸಚಿವರ ಜತೆಗೆ ಬಂದಿದ್ದಾಗ ಶೇ.5 ಪರ್ಸೆಂಟ್ ಆರೋಪ ಕೇಳಿ ಬರುತ್ತಿದೆ. ಎಚ್ಚರಿಕೆ ಯಿಂದ ಇರುವಂತೆ ಸಿಎಂ ನೇರವಾಗಿಯೇ ಹೇಳಿದರೆಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಚರ್ಚೆ: ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿ, ಅವರ ಬೇಡಿಕೆ ಈಡೇರಿಸುವ ಭರವಸೆಯ ಜತೆಗೆ ಅವರ ಬಳಿ ಇರುವ ಮಾಹಿತಿಯನ್ನು ಬೊಮ್ಮಾಯಿ ಪಡೆದು ಕೊಂಡಿದ್ದಾರೆ. ಮಾಹಿತಿ ಲಭ್ಯವಾಗುತ್ತಿದ್ದಂತೆ ಸುಮಾರು ಮೂರು ಗಂಟೆಗಳ ಕಾಲ ಕೆಲ ಆಯ್ದ ಸಚಿವರ ಮಕ್ಕಳು, ಬಂಧುಗಳ ಜತೆ ದೂರವಾಣಿಯಲ್ಲಿ ಮಾತನಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ಕಾಮಗಾರಿಗಳು ನಡೆಯುವ ಇಲಾಖೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆದಿರುವುದಾಗಿ ಮೂಲಗಳು ಹೇಳಿವೆ.