

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್) ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೂರು ಆಡಿಯೋಗಳನ್ನು ಶಾಸಕ ಸಾ.ರಾ. ಮಹೇಶ್ ಬಹಿರಂಗಪಡಿಸಿದ್ದಾರೆ.
‘‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಬಂಧಿ, ಮೈಮುಲ್ ನಾಮನಿರ್ದೇಶಿತ ನಿರ್ದೇಶಕರ ಹೆಸರು ಈ ಆಡಿಯೊದಲ್ಲಿದೆ. ಇವರಿಗೆ ಹಣ ಕೊಟ್ಟಿದ್ದಾರೆಂದು ಅದರಲ್ಲಿ ಹೇಳಿದ್ದು, ಇಡೀ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಿ ಹೊಸದಾಗಿ ಪ್ರಕ್ರಿಯೆ ನಡೆಸಬೇಕು. ಸಮಗ್ರ ತನಿಖೆ ಆಗಬೇಕು’’ ಎಂದು ಮಹೇಶ್ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಒತ್ತಾಯಿಸಿದರು.
ಅವ್ಯವಹಾರ ನಡೆದಿದೆ ಎನ್ನುವುದಕ್ಕೆ ಲಾಕ್‌ಡೌನ್ ನಡುವೆಯೂ ತರಾತುರಿಯಲ್ಲಿ ಸಂದರ್ಶನ ನಡೆಸುತ್ತಿರುವುದೊಂದೇ ಸಾಕ್ಷಿ. ಅಭ್ಯರ್ಥಿಗಳ ಜಿಲ್ಲೆಗೆ ಹೋಗಿ ಸಂದರ್ಶನ ಮಾಡುತ್ತಿದ್ದಾರೆ. ನಗರದ ಕಾಲೇಜೊಂದರಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲಾಗಿದೆ. ಆದರೆ ಈವರೆಗೆ ಕೀ ಉತ್ತರಗಳನ್ನು ಕೊಟ್ಟಿಲ್ಲ ಏಕೆ ಎಂದು ಪ್ರಶ್ನಿಸಿದರು.
‘ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ’ ಎಂಬುದು ನಿರಾಧಾರ ಎಂದಿರುವ ಮೈಮುಲ್ ಅಧ್ಯಕ್ಷರು, ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಿ. ನಾನು ಆಯ್ಕೆಯಾದ ಅಭ್ಯರ್ಥಿಗಳ ವಂಶವೃಕ್ಷ ಬಿಡುಗಡೆ ಮಾಡಿ ಅವ್ಯವಹಾರವನ್ನು ಸಾಬೀತುಪಡಿಸುತ್ತೇನೆ ಎಂದು ಸವಾಲು ಹಾಕಿದರು.
ಈ ಆಡಿಯೋ ಒಂದು ಸ್ಯಾಂಪಲ್ ಮಾತ್ರ. ಈ ಅವ್ಯವಹಾರ ದೊಡ್ಡ ಧಾರಾವಾಹಿ ಆಗಲಿದೆ. ಮುಂದಿನ ಭಾಗದಲ್ಲಿ ಇನ್ನೊಂದು ದಾಖಲೆ ಬಿಡುಗಡೆ ಮಾಡುತ್ತೇನೆ. ಅದರಲ್ಲಿ ದೊಡ್ಡವರು ಭಾಗಿಯಾಗಿದ್ದಾರೆ ಎಂದು ತಿಳಿಸಿದರು.
ನೇಮಕಾತಿ ರದ್ದುಪಡಿಸಿದರೆ ಶಾಸಕ ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಮೇ 19ರಂದು ನಗರದಲ್ಲಿರುವ ಮೈಮುಲ್ ಮೆಗಾ ಡೇರಿ ಎದುರು ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಆಡಿಯೋದಲ್ಲಿ ಏನಿದೆ?:
ಮಹಿಳಾ ಅಭ್ಯರ್ಥಿಯೊಬ್ಬರು ಮಾತನಾಡಿರುವ ಸಂಭಾಷಣೆ ಆಡಿಯೋದಲ್ಲಿದೆ. ಅದರಲ್ಲಿ ‘ಈಗಾಗಲೇ 18 ಲಕ್ಷ ರೂ. ನೀಡಿದ್ದು, ಮತ್ತೆ 3ರಿಂದ 4 ಲಕ್ಷ ರೂ.ಹಣ ನೀಡಬೇಕು. ಹರಾಜು ಹಾಕುವಂತೆ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೆ ಕೆಲಸ ಎನ್ನುವ ಸ್ಥಿತಿ ಇದೆ. ಆದರೆ, ಸಂದರ್ಶನದಲ್ಲಿ ಸಂದರ್ಶಕರಿಗೆ ಏನು ಹೇಳಬೇಡ. ಅವರು ನಮಗೆ ಕೆಲಸ ಮಾಡಿಕೊಡುತ್ತಾರೆ’ ಎಂದು ಪ್ರಸ್ತಾಪಿಸಿರುವ ವಿಷಯವೂ ಆಡಿಯೋದಲ್ಲಿ ಇದೆ.
ಮಹಿಳೆ ಮತ್ತು ತುಮಕೂರು ಡೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರ ನಡುವಿನ ಮತ್ತೊಂದು ಸಂಭಾಷಣೆ ಆಡಿಯೊದಲ್ಲಿ ಇದೆ. ಮೈಮುಲ್ ನಿರ್ದೇಶಕರಿಗೆ ಮಾರ್ಕೆಟಿಂಗ್ ಅಧಿಕಾರಿ ಹುದ್ದೆಗಾಗಿ 40 ಲಕ್ಷ ರೂ. ಹಣವನ್ನು ಮಂಗಳೂರು ಡೇರಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ನೀಡಿದ್ದಾರೆ. ಅವರ ತಂದೆ ನಿವೃತ್ತ ನೌಕರರಾಗಿದ್ದು, ವಿಜಯನಗರದಲ್ಲಿ ಬಂಗಲೆಯಂತಹ ಮನೆ ಕಟ್ಟಿದ್ದಾರೆ ಎಂಬ ವಿಷಯವೂ ಪ್ರಸ್ತಾಪವಾಗುತ್ತದೆ.
ನೇಮಕಾತಿ ಕುರಿತು ಮನೆಗೆ ಹೋಗಿ ಮಾತನಾಡಬೇಕು. ಫೋನ್‌ನಲ್ಲಿ ಯಾವುದೇ ಮಾತುಕತೆ ಇಲ್ಲ ಎಂದು ಮತ್ತೊಂದು ಆಡಿಯೋದಲ್ಲಿ ವ್ಯಕ್ತಿ ಸಂಭಾಷಣೆ ವೇಳೆ ಹೇಳುತ್ತಾರೆ.