

ಬೆಂಗಳೂರು: ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಮನೆಕೆಲಸದಾಕೆಯನ್ನು ವೈಯಾಲಿ ಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಿ.ಲಲಿತಾ(೪೫) ಬಂಧಿತ ಆರೋಪಿತೆ. ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ನರ್ಸಿಂಗ್ ವಿದ್ಯಾರ್ಥಿನಿ ಪಿ.ಸುಶ್ಮಿತ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಶನಿವಾರ ತಡರಾತ್ರಿ ವೈಯಾಲಿಕಾವಲ್ ಮನೆಯಲ್ಲಿ ತನ್ನ ಮನೆ ಮಾಲೀಕರ ಸ್ನೇಹಿತರ ಮಗಳಾದ ಸುಶ್ಮಿತಾ ಎಂಬುವರ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಲಿತಾ, ಮಲ್ಲೇಶ್ವರ ಸಮೀಪದ ಬಸಪ್ಪ ಗಾರ್ಡನ್‌ನಲ್ಲಿ ವಾಸಿಸುವ ವೇಣುಗೋಪಾಲ್ ಮತ್ತು ಸರೋಜಮ್ಮ ದಂಪತಿಯ ಮನೆಯಲ್ಲಿ ಮನೆಕೆಲಸ ಮಾಡುತ್ತಿದ್ದರು. ಸುಶ್ಮಿತ ತನ್ನ ಕಾಲೇಜಿನ ಬಳಿ ಪೇಯಿಂಗ್ ಗೆಸ್ಟ್(ಪಿ.ಜಿ) ವಾಸಿಸುತ್ತಿದ್ದಳು. ಸುಶ್ಮಿತಾ ತಂದೆಯ ಸ್ನೇಹಿತರಾದ ವೇಣುಗೋಪಾಲ್ ದಂಪತಿ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು. ಇದೇ ರೀತಿ ವರಮಹಾಲಕ್ಷ್ಮೀ ಹಬ್ಬಕ್ಕೆ ಶುಕ್ರವಾರ ಕೂಡ ಬಂದಿದ್ದರು. ಆ ದಿನ ಲಲಿತಾ ಅವರ ಕೆಲಸದ ಬಗ್ಗೆ ಸುಶ್ಮಿತ ಅಸಮಾಧಾನ ವ್ಯಕ್ತಪಡಿಸಿ ಹೀಯಾಳಿಸಿದ್ದಳು ಎನ್ನಲಾಗಿದೆ. ಇದಕ್ಕೆ ಲಲಿತಾ, ಚಿಕ್ಕ ಹುಡುಗಿಯಿಂದ ನಾನು ನನ್ನ ಕೆಲಸ ಕಲಿಯಬೇಕಾಗಿಲ್ಲ ಎಂದು ಕೂಗಾಡಿದ್ದರು. ಅಷ್ಟೇ ಅಲ್ಲದೇ ಸುಶ್ಮಿತಯಿಂದ ತನಗೆ ಅವಮಾನವಾಗಿದೆ ಎಂದು ಭಾವಿಸಿದ ಲಲಿತಾ ಆಕ್ರೋಶಗೊಂಡಿದ್ದರು. ಶನಿವಾರ ತಡರಾತ್ರಿ ೧ ಗಂಟೆ ಸುಮಾರಿಗೆ ಸುಶ್ಮಿತಾ ಮಲಗಿದ್ದ ಮೂರನೆಯ ಮಹಡಿಯಲ್ಲಿದ್ದ ಕೋಣೆಗೆ ತೆರಳಿ ಮನೆಯಲ್ಲಿದ್ದ ಮಚ್ಚನಿಂದ ಮುಖ ಮತ್ತು ಭುಜಕ್ಕೆ ಹಲ್ಲೆ ನಡೆಸಿದ್ದರು. ಈ ವೇಳೆ ಸುಶ್ಮಿತಾ ಕಿರುಚಾಡಿದ್ದರೂ ನೆಲ ಮಹಡಿಯಲ್ಲಿದ್ದ ವೇಣುಗೋಪಾಲ್ ದಂಪತಿಗೆ ಇದು ಕೇಳಿಸಿರಲಿಲ್ಲ. ಹಲ್ಲೆಯಿಂದಾಗಿ ಸುಶ್ಮಿತ ಪ್ರಜ್ಞೆ ಕಳೆದುಕೊಂಡಿದ್ದಳು.
ಆಂಟಿ ಬೇಗ ಬಂದು ನನ್ನನ್ನು ಕಾಪಾಡಿ:
ಬೆಳಗಿನ ಜಾವ ಮೂರು ಗಂಟೆಯ ಸುಮಾರಿಗೆ ಸುಶ್ಮಿತಗೆ ಪ್ರಜ್ಞೆ ಬಂದಿದ್ದು, ಸರೋಜ ಅವರ ಮೊಬೈಲ್‌ಗೆ ಕರೆ ಮಾಡಿ ಆಂಟಿ ಬೇಗ ಬಂದು ನನ್ನನ್ನು ಕಾಪಾಡಿ ಎಂದು ಕೇಳಿಕೊಂಡಿದ್ದಳು. ಇದರಿಂದ ಆತಂಕಗೊಂಡು ಮಹಡಿಯಲ್ಲಿನ ಕೋಣೆಗೆ ಹೋಗಿ ನೋಡಿದ್ದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಸರೋಜ ಅವರು ಪತಿ ವೇಣುಗೋಪಾಲ್‌ಗೆ ವಿಷಯ ತಿಳಿಸಿದ್ದಾರೆ. ಅವರು ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದು, ಗಸ್ತು ತಿರುಗುತ್ತಿದ್ದ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬಂದು ನಂತರ ಆಂಬ್ಯುಲೆಸ್‌ಗೆ ಕರೆಸಿಕೊಂಡು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.