ಮಹಿಷ ದಸರಾಕ್ಕೆ ತಡೆ ಸಲ್ಲದು

Published on

ಎಚ್.ಡಿ. ಕೋಟೆ: ಮಹಿಷ ದಸರಾ ಕಾರ್ಯಕ್ರಮಕ್ಕೆ ಸಂಸದ ಪ್ರತಾಪ ಸಿಂಹ ಅವರು ತಡೆ ಒಡ್ಡುವ ಮೂಲಕ ಜನರ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆದಿಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ ಹೇಳಿದರು.
ಸಂಸದರು ಜನಾಂಗೀಯ ಘರ್ಷಣೆ ಉಂಟು ಮಾಡುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವು ಯಾರ ಭಾವನೆಗಳಿಗೆ ವಿರುದ್ಧವಾಗಿಯೂ ದಸರಾ ಮಾಡುತ್ತಿಲ್ಲ. ಇತಿಹಾಸವನ್ನು ಓದಿ ಮಾತನಾಡುತ್ತಿದ್ದೇವೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅ. 13ರಂದು ಮೈಸೂರಿನಲ್ಲಿ ನಡೆಯುವ ಮಹಿಷ ದಸರಾಕ್ಕೆ ತಾಲೂಕಿನಿಂದ ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದೇವೆ. ಪ್ರತಿಯೊಂದು ಗ್ರಾಮದಿಂದಲೂ ಜನರು ಸ್ವಯಂ ಪ್ರೇರಣೆಯಿಂದ ವಾಹನಗಳನ್ನು ಮಾಡಿಕೊಂಡು ತೆರಳಲು ಸಿದ್ಧರಾಗಿದ್ದಾರೆ. 200ಕ್ಕೂ ಹೆಚ್ಚು ಬೈಕ್ ಮೂಲಕ ರ‌್ಯಾಲಿಯಲ್ಲಿ ಮೈಸೂರಿಗೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು. ನಮ್ಮ ಮಹಿಷ ದಸರಾಕ್ಕೆ ಪ್ರತಾಪ ಸಿಂಹ ಅವರನ್ನೂ ಮುಕ್ತವಾಗಿ ಆಹ್ವಾನ ಮಾಡುತ್ತೇವೆ. ಮಹಿಷಾಸುರ ಒಬ್ಬ ರಾಕ್ಷಸ ಎಂಬುದನ್ನು ಅವರು ಸಾಬೀತು ಮಾಡಲಿ ಎಂದರು.
ತಾಲೂಕು ಆದಿಕರ್ನಾಟಕ ಮಹಾಸಭಾದ ಮಾಜಿ ಅಧ್ಯಕ್ಷರಾದ ಸೋಗಹಳ್ಳಿ ಶಿವಣ್ಣ, ಹೈರಿಗೆ ಮುದ್ದಮಲ್ಲಯ್ಯ, ಮುಖಂಡರಾದ ಶಿವರಾಜು, ರಮೇಶ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net