ಮಹೇಶ ಜೋಶಿ ಕ್ಷಮೆಯಾಚನೆಗೆ ಆಗ್ರಹ

press meet.1---04
Published on

ಚಿತ್ರದುರ್ಗ: ನಾಯಕನಹಟ್ಟಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮೊಟಕುಗೊಳಿಸುವಂತೆ ಸೂಚಿಸಿ ಸಮ್ಮೇಳನಾಧ್ಯಕ್ಷ ಬಿ.ತಿಪ್ಪಣ್ಣ ಮರಿಕುಂಟೆ ಅವರನ್ನು ಅವಮಾನಿಸಲಾಗಿದ್ದು, ಕೂಡಲೇ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಕ್ಷಮೆಯಾಚಿಸಬೇಕು ಎಂದು ಪರಿಷತ್ ಆಜೀವ ಸದಸ್ಯ ಚಿಕ್ಕಪ್ಪನಹಳ್ಳಿ ಷಣ್ಮುಖ ಆಗ್ರಹಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಧ್ಯಕ್ಷರಾಗಿ ತಿಪ್ಪಣ್ಣ ಮರಿಕುಂಟೆ ಹಾಗೂ ಸಮ್ಮೇಳನ ನಡೆಸಿದ ಸ್ಥಳದ ಆಯ್ಕೆ ಸ್ವಾಗತಾರ್ಹ. ಆದರೆ, ಜಿಲ್ಲಾ ಸಮ್ಮೇಳನಕ್ಕೆ ಆಜೀವ ಸದಸ್ಯರಿಗೆ, ಪತ್ರಕರ್ತರಿಗೆ ಆಹ್ವಾನ ಪತ್ರಿಕೆ ನೀಡದೆ ಶಿಷ್ಠಾಚಾರ ಉಲ್ಲಂಘಿಸಲಾಗಿದೆ ಎಂದು ದೂರಿದರು.

ಸಮ್ಮೇಳನಾಧ್ಯಕ್ಷರನ್ನು ಮನೆಯಿಂದ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಮುಗಿದ ನಂತರ ಗೌರವದಿಂದ ಮನೆಗೆ ಕರೆದುಕೊಂಡು ಹೋಗಿ ಬಿಡಬೇಕಿತ್ತು. ಇದ್ಯಾವುದನ್ನು ಮಾಡಿಲ್ಲ. ಗ್ರಾಮೀಣ ಮಟ್ಟದಲ್ಲಿ ಕನ್ನಡ ಸಾಹಿತ್ಯ ಕಟ್ಟಿಬೆಳೆಸಿದ ತಿಪ್ಪಣ್ಣ ಅವರನ್ನು ಕಡೆಗಣಿಸಲಾಗಿದೆ. ಆದ್ದರಿಂದ ಕ್ಷಮೆಯಾಚಿಸಿ ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಚಿತ್ರದುರ್ಗದಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಈವರೆಗೂ ಕೊಟ್ಟಿಲ್ಲ. ಕೂಡಲೇ ಬಹಿರಂಗಪಡಿಸಿ ಉಳಿದ 35 ಲಕ್ಷ ರೂ. ನಿಂದ ಕನ್ನಡ ಭವನ ನಿರ್ಮಿಸಬೇಕು. ಜತೆಗೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಅನುದಾನ ನೀಡಿದ್ದು, 15 ದಿನದೊಳಗೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಸಾರ್ವಜನಿಕವಾಗಿ ತಿಳಿಸಬೇಕು ಎಂದು ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಶ.ಮಂಜುನಾಥ್ ಮಾತನಾಡಿ, ಆಜೀವ ಸದಸ್ಯರಿಗೆ ಜಿಲ್ಲಾ ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಸೌಜನ್ಯಕ್ಕಾದರೂ ತಲುಪಿಸುವ ಕೆಲಸ ಮಾಡಿಲ್ಲ. ಪ್ರತಿ ತಿಂಗಳು ಪರಿಷತ್ತಿನಿಂದ ನೀಡುತ್ತಿದ್ದ ಕನ್ನಡ ನುಡಿ ಪುಸ್ತಕ ಬರುತ್ತಿಲ್ಲ ಎಂದು ಬೇಸರಿಸಿದರು.

ನಿವೃತ್ತ ಪ್ರಾಧ್ಯಾಪಕ ಡಾ.ಸಂಗೇನಹಳ್ಳಿ ಅಶೋಕ್‌ಕುಮಾರ್ ಮಾತನಾಡಿ, ತಿಪ್ಪಣ್ಣ ಅವರಿಗೆ ಮಾಡಿರುವ ಅವಮಾನ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಆದ್ದರಿಂದ ಜೋಶಿ ಅವರು ಸಮಸ್ತ ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net