'ಗುಂಟೂರು ಕಾರಂ' ಟೀಮ್ ವಿರುದ್ಧ ಕಿಡಿಕಾರಿದ ಮಹೇಶ್ ಬಾಬು ಫ್ಯಾನ್ಸ್​! ಕಾರಣ ಹೀಗಿದೆ…

ವಿಜಯವಾಣಿ - 2023-12-20T120135.797
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಪ್ರಿನ್ಸ್​ ಎಂದೇ ಖ್ಯಾತಿ ಪಡೆದಿರುವ ನಟ ಮಹೇಶ್​ ಬಾಬು ಅಭಿನಯದ ಬಹುನಿರೀಕ್ಷಿತ 'ಗುಂಟೂರು ಕಾರಂ' ಸಿನಿಮಾ ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಇದೀಗ ಚಿತ್ರತಂಡದ ವಿರುದ್ಧ ಮಹೇಶ್​ ಅಭಿಮಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಗುಂಟೂರು ಕಾರಂ' ಚಿತ್ರವು ಈ ಹಿಂದೆಯೂ ಹಲವು ಬಾರಿ ಮಹೇಶ್​ ಬಾಬು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅದೇ ರೀತಿ ಇದೀಗ ಮತ್ತೊಮ್ಮೆ ಅಪಾರ ಫ್ಯಾನ್ಸ್​ಗಳ ಕೋಪಕ್ಕೆ ತುತ್ತಾಗಿದೆ. ಇದಕ್ಕೆ ಕಾರಣ ಹೀಗಿದೆ.

'ಗುಂಟೂರು ಕಾರಂ' ಚಿತ್ರೀಕರಣ ಬಹುತೇಕ ಮುಗಿದಿದ್ದು, ಮಹೇಶ್​ ಬಾಬು ಮತ್ತು ಶ್ರೀಲೀಲಾ ಅವರ ಸಾಂಗ್​ ಶೂಟಿಂಗ್ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದೆ. ಸದ್ಯ ಈ ಸಂಗತಿ ಮಹೇಶ್ ಅವರ ಅಭಿಮಾನಿಗಳಲ್ಲಿ ಭಾರೀ ಕಳವಳ ಹೆಚ್ಚಿಸಿದೆ. ಈ ರೀತಿ ಬಿಡುಗಡೆಯಾಗುವ ಮುನ್ನವೇ ಸಿನಿಮಾದ ಚಿತ್ರೀಕರಣದ ದೃಶ್ಯಗಳು ಆನ್​ಲೈನ್​ನಲ್ಲಿ ಲೀಕ್​ ಆಗಿರುವುದು ಇದೇ ಮೊದಲಲ್ಲ! ಆದ್ರೆ, ತಮ್ಮ ನೆಚ್ಚಿನ ನಟನ ಸಿನಿಮಾಗೆ ಈ ಪರಿಸ್ಥಿತಿ ಎದುರಾಗಿದ್ದು, ಫ್ಯಾನ್ಸ್​ಗಳಿಗೆ ಚಿತ್ರತಂಡದ ಮೇಲೆ ಭಾರೀ ಬೇಸರ ಮೂಡಿಸಿದೆ.

ಹೊರಾಂಗಣ ಶೂಟಿಂಗ್ ಕ್ಲಿಪ್‌ಗಳನ್ನು ನಿರ್ವಹಿಸುವುದು ಸವಾಲಿನಂತಿದ್ದರೂ, ಒಳಾಂಗಣ ಚಿತ್ರೀಕರಣದ ಸಮಯದಲ್ಲಿ ಸ್ಮಾರ್ಟ್‌ಫೋನ್ ಮತ್ತು ಫೋಟೋಗ್ರಾಫಿಕ್ ಸಾಧನದ ಬಳಕೆಯನ್ನು ನಿಯಂತ್ರಿಸುವ ಬಗ್ಗೆ ಆಶಾವಾದವಿದೆ. ಇತ್ತೀಚೆಗೆ 'ಓಹ್ ಮೈ ಬೇಬಿ' ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅಭಿಮಾನಿಗಳು, ಈಗ ಮತ್ತೊಮ್ಮೆ ಚಿತ್ರತಂಡಕ್ಕೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಒಳಾಂಗಣ ಶೂಟಿಂಗ್ ಸಮಯದಲ್ಲಿ ಸೋರಿಕೆಯ ಮೇಲೆ ಉತ್ತಮ ನಿಯಂತ್ರಣ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್ ಬಾಬು, ಮೀನಾಕ್ಷಿ ಚೌಧರಿ, ಜಗಪತಿ ಬಾಬು, ರಮ್ಯಾ ಕೃಷ್ಣನ್, ಪ್ರಕಾಶ್ ರಾಜ್, ವೆನ್ನೆಲ ಕಿಶೋರ್ ಮುಂತಾದವರ ತಾರಾಗಣವಿದೆ. ಹರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net