

ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ಬಾಬು ಸಿನಿಮಾ ಘೋಷಣೆಯಾದ್ರೆ ಸಾಕು ಅಂದಿನಿಂದಲೇ ಅಭಿಮಾನಿಗಳ ನಿರೀಕ್ಷೆ ಎಷ್ಟಿರುತ್ತದೆ ಎಂಬುದು ಹೇಳಲಾಗದು. ಇತ್ತೀಚೆಗೆ ಮಹೇಶ್ ಬಾಬು ಅವರ ಹೆಸರು 'ಮುಫಾಸಾ: ದಿ ಲಯನ್ ಕಿಂಗ್'(Mufasa The Lion King) ನೊಂದಿಗೆ ತಳುಕು ಹಾಕಿದಾಗಿನಿಂದ ಅವರ ಅಭಿಮಾನಿಗಳು ಅದರ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದರು. ಟ್ರೇಲರ್ ಬಿಡುಗಡೆಯಾದಾಗ ತೆಲುಗು ಆವೃತ್ತಿಯಲ್ಲಿ ಮುಫಾಸಾಗಾಗಿ ಮಹೇಶ್ ಬಾಬು ಅವರ ಧ್ವನಿಯನ್ನು ಕೇಳಿದ ನಂತರ ಅಭಿಮಾನಿಗಳ ಸಂತೋಷಕ್ಕೆ ಮಿತಿಐಎ ಇರಲಿಲ್ಲ.
ಮುಫಾಸಾ: ದಿ ಲಯನ್ ಕಿಂಗ್' ತೆಲುಗು ಆವೃತ್ತಿಯು ಡಿಸೆಂಬರ್ 20ರಂದು ಬಿಡುಗಡೆಯಾಗಿದೆ. ಸಿನಿಮಾ ನೋಡಲು ಕೆಲವು ಅಭಿಮಾನಿಗಳು ಕೇಕ್ನೊಂದಿಗೆ ಬಂದರೆ ಮತ್ತೆ ಕೆಲವರು ಪೋಸ್ಟರ್‌ನೊಂದಿಗೆ ಥಿಯೇಟರ್ ತಲುಪಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಪ್ರಿನ್ಸ್ ಮಹೇಶ್ಬಾಬು ಅಭಿಮಾನಿಯೊಬ್ಬರು ಮುಫಾಸಾ: ದಿ ಲಯನ್ ಕಿಂಗ್' ನೋಡಲು ತಮ್ಮ ಬೆಕ್ಕಿನೊಂದಿಗೆ ಬಂದಿದ್ದಾರೆ. ಸಿನಿಮಾ ವೀಕ್ಷಣೆ ಬಳಿಕ ಚಿತ್ರದಲ್ಲಿ ರಫಿಕಿ ಪುಟ್ಟ ಸಿಂಬಾಳನ್ನು ಎತ್ತಿಕೊಳ್ಳುವ ರೀತಿಯಲ್ಲಿಯೇ ಅಭಿಮಾನಿ ಬೆಕ್ಕನ್ನು ಎತ್ತಿಕೊಂಡಿರುವುದನ್ನು ನೋಡಬಹುದು.
ಈ ಬೆಕ್ಕು ನೋಟದಲ್ಲಿ ಸಿಂಬಾವನ್ನು ಹೋಲುತ್ತದೆ ಎಂದು ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಪುಟ್ಟ ಸಿಂಬಾಳನ್ನು ಎತ್ತಿಕೊಳ್ಳುವ ರೀತಿಯಲ್ಲಿಯೇ ಅಭಿಮಾನಿ ಬೆಕ್ಕನ್ನು ಎತ್ತಿಕೊಂಡಿದ್ದಾರೆ. ಆ ದೃಶ್ಯದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.(ಏಜೆನ್ಸೀಸ್)