

ಹೈದರಾಬಾದ್: ತೆಲುಗು ಚಿತ್ರರಂಗದಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಪಾತ್ರಧಾರಿ ದಿ.ಎನ್.ಟಿ.ರಾಮರಾವ್. ತೆಲುಗಿನಲ್ಲಷ್ಟೇ ಅಲ್ಲ, ಇಡೀ ದೇಶದಲ್ಲಿ ಅವೆರಡೂ ಪಾತ್ರಗಳನ್ನು ನೆನೆದರೆ ಎನ್ಟಿಆರ್ ಎದುರು ಬಂದು ನಿಂತಂತಿರುತ್ತದೆ ಎಂಬುದು ಕೋಟ್ಯಂತರ ಜನರ ಭಾವನೆ. ಅದೇ ರೀತಿ ಈಗ ಶ್ರೀಕೃಷ್ಣನ ಪಾತ್ರದಾರಿಯಾಗಲಿರುವ ಖ್ಯಾತ ನಟನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಸದ್ದು ಮಾಡುತ್ತಿದೆ.
ಇಷ್ಟಕ್ಕೂ ಆ ಸೂಪರ್ ಸ್ಟಾರ್ ಯಾರು ಅಂದುಕೊಂಡಿರಾ? ಅವರು ಮತ್ತಿನ್ನಾರೂ ಅಲ್ಲ, ಮಹೇಶ್ ಬಾಬು(Mahesh babu). ಮಹೇಶ್ ಬಾಬು ಅವರ ಸೋದರಳಿಯ ಅಶೋಕ್ ಗಲ್ಲಾ ನಾಯಕನಾಗಿರುವ ‘ದೇವಕಿ ನಂದನ ವಾಸುದೇವ’ ಚಿತ್ರದಲ್ಲಿಮಹೇಶ್ ಬಾಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಕ್ಲೈಮ್ಯಾಕ್ಸ್ ನಲ್ಲಿ ಶ್ರೀಕೃಷ್ಣನಿಗೆ ಸಂಬಂಧಿಸಿದ ಕೆಲವು ದೃಶ್ಯಗಳಿದ್ದು, ಅದರಲ್ಲಿ ಮಹೇಶ್ ಬಾಬು ನಟಿಸಿದರೆ ಚೆನ್ನಾಗಿರುತ್ತದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ ಎಂದು ವರದಿಯಾಗಿದೆ.
ಹೀಗಾಗಿಯೇ ಚಿತ್ರತಂಡ ಮಹೇಶ್ ಬಾಬುಗೆ ಮನವರಿಕೆ ಮಾಡಿಕೊಟ್ಟಿದೆಯಂತೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಹೀಗಿದ್ದರೂ, ತೆಲುಗು ರಾಜ್ಯಗಳಲ್ಲಿ ಶ್ರೀಕೃಷ್ಣನ ಬಗ್ಗೆ ಕ್ರೇಜ್ ಹೆಚ್ಚಾಗಿ ಇರುವುದರಿಂದ ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದೇವಕಿ ನಂದನ ವಾಸುದೇವ ಚಿತ್ರಕ್ಕೆ ಅರ್ಜುನ್ ಜಂಧ್ಯಾಳ ನಿರ್ದೇಶನವಿದ್ದು, ಪ್ರಶಾಂತ್ ವರ್ಮ ಕಥೆ ಬರೆದಿದ್ದಾರೆ. ಅಶೋಕ್ ಗಲ್ಲಾ ನಾಯಕನಾಗಿದ್ದು, ಮಾನಸಾ ವಾರಣಾಸಿ ನಾಯಕಿಯಾಗಿ ನಟಿಸುತ್ತಿದ್ದಾರೆ.