

ಶಿವಮೊಗ್ಗ: ಯುವಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಸ್ವಾಮಿ ವಿವೇಕಾನಂದರ ಓದು ಎಂದಿಗಿಂತ ಇಂದು ಹೆಚ್ಚಿದೆ ಎಂದು ಯುವ ಕಾಂಗ್ರೆಸ್ ವಕ್ತಾರ ಆದರ್ಶ ಹುಂಚದಕಟ್ಟೆ ತಿಳಿಸಿದರು.
ಮಹಾವೀರ ವೃತ್ತದಲ್ಲಿ ಜಿಲ್ಲಾ ಎನ್‌ಎಸ್‌ಯುಐನಿಂದ ಗುರುವಾರ ಸ್ವಾಮಿ ವಿವೇಕಾನಂದರ 160ನೇ ಜಯಂತಿಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ವಿವೇಕಾನಂದರ ಕಾಲಘಟ್ಟದಲ್ಲಿ ತೀರಾ ವಿಷಮ ಪರಿಸ್ಥಿತಿ ಇತ್ತು. ಅಂದು ಧರ್ಮ ಜಾಗೃತಿಯ ಜತೆಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇತ್ತು. ಅಂತಹ ಸಂದರ್ಭದಲ್ಲಿ ವಿವೇಕಾನಂದರು ಯುವಕರನ್ನು ಜಾಗೃತಗೊಳಿಸಿದ್ದರು. ಚಿಕಾಗೋ ಭಾಷಣದಲ್ಲಿ ಅವರು ಕೇವಲ ಹಿಂದೂ ಧರ್ಮದ ಪ್ರಾಚೀನತೆ ಮತ್ತು ಶ್ರೇಷ್ಠತೆ ಬಗ್ಗೆ ಹೇಳಿರಲಿಲ್ಲ. ಎಲ್ಲ ಧರ್ಮಗಳೂ ಕೊನೆಗೆ ಸಾಕ್ಷಾತ್ಕಾರವನ್ನೇ ಸಾರುತ್ತವೆ ಎಂದಿದ್ದರು. ಎಲ್ಲ ಧರ್ಮಗಳವರನ್ನೂ ಸಹೋದರ-ಸಹೋದರಿಯರಂತೆ ಕಾಣಬೇಕು ಎಂದು ಸಂದೇಶ ನೀಡಿದ್ದರು ಎಂದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್ ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಯುವಕರು, ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಪಾಲಿಸಲು ಮುಂದಾಗಬೇಕು ಎಂದರು.
ಎನ್‌ಎಸ್‌ಯುಐ ನಗರಾಧ್ಯಕ್ಷ ಚರಣ್, ಮುಖಂಡ ಹರ್ಷಿತ್‌ಗೌಡ ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯ ರಮೇಶ್ ಹೆಗಡೆ, ಪ್ರಮುಖರಾದ ರವಿ, ಆಕಾಶ್, ಶಿವು ಮಲಗೊಪ್ಪ, ತೌಫಿಕ್, ವಿಶಾಲ್, ಚಂದ್ರೋಜಿ ರಾವ್, ರುಕ್ಮಾನ್, ಸಾಗರ್, ಚರಣ್, ಉಲ್ಲಾಸ್ ಶೆಟ್ಟಿ, ಗಿರೀಶ್, ಸುಹಾಸ, ಜಗದೀಶ್, ದೇವರಾಜ್, ಸುದರ್ಶನ್ ಮತ್ತಿತರರಿದ್ದರು. ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.