ಗಾಂಧಿಯೂ ಅನುಭವಿಸಿದ್ದರು ಕ್ವಾರಂಟೈನ್!

Gandhiji 26 april 20
Published on

| ಮುಳ್ಳೂರು ರಾಜು ಮೈಸೂರು

ಕ್ವಾರಂಟೈನ್, ಐಸೋಲೇಷನ್, ಲಾಕ್​ಡೌನ್, ಸೀಲ್​ಡೌನ್... ಈ ಪದಗಳನ್ನು ಬಹುತೇಕರು ಈ ಹಿಂದೆ ಕೇಳಿರಲೇ ಇಲ್ಲ. ಕರೊನಾ ಎಂಬ ಮಹಾಮಾರಿ ಅನಿರೀಕ್ಷಿತವಾಗಿ ಬಂದೆರಗಿದ ಮೇಲೆ ಎಲ್ಲರ ಬಾಯಲ್ಲೂ ಮತ್ತು ಸುದ್ದಿ ಮಾಧ್ಯಮಗಳಲ್ಲೂ ಮೇಲಿನ ಪದಗಳದ್ದೇ ಕಾರುಬಾರು!

ಕರೊನಾ ಶಂಕಿತರು 14 ದಿನ ಕಾಲ ಕ್ವಾರಂಟೈನ್​ನಲ್ಲಿ ಇರುವುದು ಕಡ್ಡಾಯ. ಈ ಕ್ವಾರಂಟೈನ್ ಎಂಬುದು ಹೊಸದು ಅಥವಾ ಇತ್ತೀಚಿನದ್ದೇನೂ ಅಲ್ಲ. ಮಹಾತ್ಮ ಗಾಂಧಿ ಅವರೂ ಸ್ವತಃ ಕ್ವಾರಂಟೈನ್ ಅನುಭವಿಸಿದ್ದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಈ ಸಂಗತಿಯನ್ನು ಗಾಂಧಿ ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ (ಮೋ.ಕ.ಗಾಂಧಿ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ ಭಾಷಾಂತರ: ಗೊರೂರು ರಾಮಸ್ವಾಮಿ ಅಯ್ಯಂಗಾರ್).

1891ರಲ್ಲಿ ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದ ಗಾಂಧಿ ಭಾರತಕ್ಕೆ ಆಗಮಿಸಿ, ವಕೀಲ ವೃತ್ತಿ ಆರಂಭಿಸಿದರು. ಭಾರತದಲ್ಲಿ ಆ ವೃತ್ತಿಗೆ ಹೊಂದಿಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ 1893ರಲ್ಲಿ ದಕ್ಷಿಣ ಆಫ್ರಿಕಾಗೆ ತೆರಳಿ ಒಂದು ವರ್ಷದ ವಕೀಲ ವೃತ್ತಿ ಅಭ್ಯಾಸ ಮಾಡತೊಡಗಿದರು. ಆಗ ಅಲ್ಲಿ ಭಾರತೀಯರ ಮಾತಾಧಿಕಾರ ರದ್ದು ಮತ್ತು ತೆರಿಗೆ ಹೇರಿಕೆ ಕಾಯ್ದೆಗಳು ಜಾರಿಗೊಂಡಿದ್ದರಿಂದ ಅದರ ವಿರುದ್ಧ ಹೋರಾಟ ಆರಂಭಿಸಿದರು. ಅದುವರೆಗೆ ಭಾರತದಲ್ಲಿಯೇ ಇದ್ದ ಸಂಸಾರವನ್ನು ದಕ್ಷಿಣ ಆಫ್ರಿಕಾಗೆ ಕರೆತರಲು ಗಾಂಧಿ ನಿರ್ಧರಿಸಿ, 1896ರಲ್ಲಿ ಭಾರತಕ್ಕೆ ಹಿಂದಿರುಗಿದರು. ಆರು ತಿಂಗಳ ಬಳಿಕ ಹೆಂಡತಿ, ಇಬ್ಬರು ಪುಟ್ಟ ಮಕ್ಕಳು ಮತ್ತು ವಿಧವೆಯಾಗಿದ್ದ ತನ್ನ ಅಕ್ಕನ ಮಗನೊಬ್ಬನನ್ನು ಜತೆಯಲ್ಲಿ ಕರೆದುಕೊಂಡು ಬೊಂಬಾಯಿಯಿಂದ ಹಡಗಿನಲ್ಲಿ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಿದರು. ಅದೇ ವೇಳೆ ಮತ್ತೊಂದು ಹಡಗೂ ದ.ಆಫ್ರಿಕಾದತ್ತ ಪ್ರಯಾಣ ಹೊರಟಿತು. ಎರಡೂ ಹಡಗುಗಳು ಹದಿನೆಂಟನೇ ದಿನಕ್ಕೆ (1896 ಡಿಸೆಂಬರ್ 18, 19) ಡರ್ಬಾನ್ ರೇವು ಪಟ್ಟಣ ತಲುಪಿದವು. ಭಾರತದಿಂದ ಹೊರಟ ವೇಳೆ ಬೊಂಬಾಯಿಯಲ್ಲಿ ಪ್ಲೇಗು ರೋಗ ಕಾಣಿಸಿಕೊಂಡಿತ್ತು. ಪ್ಲೇಗು ಕ್ರಿಮಿಗಳು ಪೂರ್ಣವಾಗಿ ಬೆಳೆಯಲು ಹೆಚ್ಚೆಂದರೆ 23 ದಿನ ಬೇಕಾಗುತ್ತಿತ್ತು. ಆದ್ದರಿಂದ ಇಪ್ಪತ್ಮೂರನೇ ದಿನದವರೆಗೆ, ಈಗಾಗಲೇ ಹದಿನೆಂಟು ದಿನ ಪ್ರಯಾಣದಲ್ಲಿ ಕಳೆದಿದ್ದರಿಂದ ಉಳಿದ ಐದು ದಿನಗಳವರೆಗೆ ನಮ್ಮ ಹಡಗು ಕ್ವಾರಂಟೈನ್​ನಲ್ಲಿ ಇರಬೇಕೆಂದು (ಸಮುದ್ರದಲ್ಲಿಯೇ ನಿಲ್ಲಬೇಕೆಂದು) ಅಪ್ಪಣೆಯಾಯಿತು. ಈ ಕ್ವಾರಂಟೈನ್ ಅವಧಿಯಲ್ಲಿ ಪ್ರಯಾಣಿಕರ ಮನೋರಂಜನೆಗಾಗಿ ಹಡಗಿನಲ್ಲಿ ಬಗೆ ಬಗೆಯ ಆಟಗಳನ್ನು ಏರ್ಪಡಿಸುತ್ತಿದ್ದೆವು. ಪಾಶ್ಚಾತ್ಯ ನಾಗರಿಕತೆ ಕುರಿತು ನಾನು ಭಾಷಣ ಮಾಡುತ್ತಿದ್ದೆ. 23 ದಿನ ಕಳೆದ ಬಳಿಕ ನಮ್ಮೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಪ್ಲೇಗು ಸೋಂಕು ಇಲ್ಲವೆಂಬುದನ್ನು ದೃಢಪಡಿಸಿಕೊಂಡು, ಹಡಗಿನಿಂದ ಇಳಿಯಲು ಅಧಿಕಾರಿಗಳು ಅನುಮತಿ ಕೊಟ್ಟರು ಎಂದು ಗಾಂಧಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net