ಕುರುಬ ಸಮಾಜ ಎಸ್ಟಿಗೆ ಸೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಮಹಾಸಮ್ಮೇಳನ: ಎಚ್.ಎಂ.ರೇವಣ್ಣ

kuruba samaja meeting
ಕುರುಬರ ವಿದ್ಯಾರ್ಥಿ ನಿಲಯದಲ್ಲಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಆರ್.ಪ್ರಸನ್ನಕುಮಾರ್, ಎಂ.ಶ್ರೀಕಾಂತ್, ಎ.ಎನ್.ಮಹೇಶ, ಪಟೇಲ್ ಶಿವಣ್ಣ, ರೂಪಾ ಇಕ್ಕೇರಿ, ಗಂಡಸಿ ನಾಗರಾಜ್, ಎಸ್.ಎಂ.ಶರತ್, ಗಣೇಶ್, ರಾಮಕೃಷ್ಣ, ಭದ್ರಾವತಿ ಸತ್ಯ, ಕೆ.ರಂಗನಾಥ ಇದ್ದರು.
Published on

ಶಿವಮೊಗ್ಗ: ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ವತಿಯಿಂದ ಅ.2 ಮತ್ತು 3ರಂದು ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಕುರುಬರ ಮಹಾಸಮ್ಮೇಳನ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ರಾಷ್ಟ್ರೀಯ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.

ಕುರುಬ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕೆಂಬ ಹಕ್ಕೊತ್ತಾಯದೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಕುರುಬರನ್ನು ಒಗ್ಗೂಡಿಸುವ ಸಲುವಾಗಿ ಈ ಮಹಾಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುರುಬ ಸಮಾಜದ ಹಿತಾಸಕ್ತಿಗಳನ್ನು ಕಾಪಾಡುವ ಹಾಗೂ ಹೊಸ ಆಶಯಗಳಿಗೆ ಹೊಂದಿಕೊಳ್ಳುವ ಹತ್ತು ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡುವ ಮೂಲಕ ಕುರುಬರ ಆಶೋತ್ತರಗಳನ್ನು ರಕ್ಷಿಸುವ ಕಾರ್ಯ ಆಗಬೇಕಿದ್ದು ಆ ನಿಟ್ಟಿನಲ್ಲಿ ಅ.2ರಂದು ಸಮ್ಮೇಳನದಲ್ಲಿ ಚಿಂತನ-ಮಂಥನ ನಡೆಸಲಾಗುವುದು ಎಂದರು.
ಇಡೀ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಸಂಬಂಧ ಈಗಾಗಲೇ ಹೋರಾಟ ಆರಂಭಿಸಿದ್ದು ರಾಜ್ಯ ಸಚಿವ ಸಂಪುಟದಲ್ಲಿ ಚರ್ಚಿಸಿ ಕೇಂದ್ರಕ್ಕೆ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. ಸಮಾಜದ ಏಳಿಗೆ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚಿಂತನೆ ಮಾಡುತ್ತಿದ್ದು ಕುರಿಗಾಹಿಗಳಿಗೆ ಶಾಲೆ ಆರಂಭಿಸುವುದು, ಔಷಧ ಸಿಗುವಂತೆ ಮಾಡುವುದು ಸೇರಿ ಪ್ರಮುಖ 10 ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಕುರುಬ ಸಮಾವನ್ನು ಪ್ರತಿನಿಧಿಸಿ ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರಿಗೆ ಅ.3ರಂದು ರಾಷ್ಟ್ರೀಯ ಸನ್ಮಾನದ ಗೌರವ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಆರೋಗ್ಯ ಸಚಿವ ಸತ್ಯಪಾಲ್ ಸಿಂಗ್ ಬೇಲ್, ಹರಿಯಾಣ ರಾಜ್ಯಪಾಲ ಬಂಗಾರು ದತ್ತಾತ್ರೇಯ, ಉತ್ತರ ಪ್ರದೇಶದ ಸಚಿವ ಅಜಿತ್ ಸಿಂಗ್, ಆಂಧ್ರಪ್ರದೇಶದ ಸಚಿವೆ ಉಷಾ ಚರಣ್‌ಜಿತ್ ರೈ, ಗೋವಾ ಡಿಸಿಎಂ ಚಂದ್ರಕಾಂತ್ ಕವ್ಲೇಕರ್ ಮತ್ತಿತರರು ಆಗಮಿಸುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net