

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಲೆಕ್ಕ ವಿಭಾಗದ ಅಕೌಂಟೆಂಟ್ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ನಿಗಮದ ಅಕ್ರಮ ಹಣ ವರ್ಗಾವಣೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ನಿಗಮದ ಖಾತೆಯಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ 94.73 ಕೋಟಿ ರೂ. ವರ್ಗಾವಣೆ ಮಾಡಿದ ಆರೋಪದಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಿಇಒ ಸೇರಿ ಆರು ಮಂದಿ ವಿರುದ್ಧ ನಿಗಮದ ಪ್ರಧಾನ ವ್ಯವಸ್ಥಾಪಕ ಎ. ರಾಜಶೇಖರ್ ದೂರು ನೀಡಿದ್ದಾರೆ. ಈ ಮೇರೆಗೆ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಣಿ ಮೆಖಲೈ, ಕಾರ್ಯನಿರ್ವಾಹಕ ನಿರ್ದೇಶಕರಾದ ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್ ರುದ್ರ, ಪಂಕಜ್ ದ್ವಿವೇದಿ ಹಾಗೂ ಮುಖ್ಯವ್ಯವಸ್ಥಾಪಕಿ ಸುಚಿಶಿತ ರೌಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ರಾಜಶೇಖರ್ ನೀಡಿದ ದೂರಿನಲ್ಲಿ, ನಿಗಮವು ಯೂನಿಯನ್ ಬ್ಯಾಂಕ್ ಇಂಡಿಯಾದ ವಸಂತನಗರ ಶಾಖೆಯಲ್ಲಿ ಖಾತೆ ತೆರೆದಿದ್ದು, 2024ರ ಫೆ.19ರಂದು ಎಂ.ಜಿ.ರಸ್ತೆ ಶಾಖೆಗೆ ವರ್ಗಾಯಿಸಲಾಗಿತ್ತು. ನಿಗಮದ ಪರವಾಗಿ ಖಾತೆ ನಿರ್ವಹಿಸಲು 2024 ಫೆ.26ರಂದು ಬ್ಯಾಂಕಿನವರು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಗಳ ಸಹಿ ಪಡೆದಿದ್ದರು. 2024ರ ಮಾ.4ರಂದು 25 ಕೋಟಿ ರೂ., ಮಾ.6ರಂದು 25 ಕೋಟಿ ರೂ., ಮಾ.21ರಂದು 44 ಕೋಟಿ ರೂ., ಮಾ.22ರಂದು 33 ಕೋಟಿ ರೂ. ಹಾಗೂ ಮೇ 21ರಂದು 50 ಕೋಟಿ ರೂ. ಸೇರಿ 187.33 ಕೋಟಿ ರೂ. ವಿವಿಧ ಬ್ಯಾಂಕ್ ಖಾತೆಗಳು ಮತ್ತು ರಾಜ್ಯ ಖಜಾನೆ-2ರಿಂದ ನಿಗಮದ ಖಾತೆಗೆ ಜಮೆಯಾಗಿದೆ.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ನಿಗಮ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಡುವೆ ಯಾವುದೇ ಮಾತುಕತೆ ಮತ್ತು ಪತ್ರ ವ್ಯವಹಾರ ನಡೆಸಿಲ್ಲ. ಬ್ಯಾಂಕಿನವರು ನಿಗಮದ ಅಧಿಕೃತ ವಿಳಾಸಕ್ಕೆ ಚೆಕ್‌ಬುಕ್, ಪಾಸ್‌ಬುಕ್‌ಗಳನ್ನು ಕಳುಹಿಸಿರಲಿಲ್ಲ. ಮೇ 22ರಂದು ನಿಗಮದ ಅಧಿಕಾರಿಗಳು ಬ್ಯಾಂಕ್‌ಗೆ ತೆರಳಿ ಚೆಕ್‌ಬುಕ್, ಪಾಸ್‌ಬುಕ್ ಮತ್ತು ನಿಗಮದ ಖಾತೆಗೆ ಸಂಬಂಧಿಸಿದ ದಾಖಲಾತಿಗಳ ಬಗ್ಗೆ ಕೇಳಿದಾಗ ನಿಗಮದ ವಿಳಾಸಕ್ಕೆ ಕಳುಹಿಸಿರುವುದಾಗಿ ಹೇಳಿದ್ದಾರೆ. ಆದರೆ, ಯಾವುದೇ ದಾಖಲೆ ತಲುಪಿಲ್ಲ.
ನಿಗಮಕ್ಕೆ ಸಂಬಂಧಿಸಿದ ದಾಖಲಾತಿಗಳು, ಆರ್‌ಟಿಜಿಎಸ್ ಬೋರ್ಡ್ ರೆಸುಲ್ಯೂಷನ್ ಜತೆಗೆ ಸಹಿ ನಕಲು ಮಾಡಿ ಕಾನೂನುಬಾಹಿರವಾಗಿ ಹಣ ವರ್ಗಾವಣೆ ಮಾಡಿರುವುದು ಕಂಡು ಬಂದಿದೆ. ನಿಗಮದ ಖಾತೆಯಿಂದ 94.73 ಕೋಟಿ ರೂ.ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿದೆ. ಈ ಕುರಿತು ನಿಗಮದ ಅಧಿಕೃತ ಇ-ಮೇಲ್‌ಗೆ ಸಂದೇಶ, ಮಾಹಿತಿ ನೀಡಿರುವುದಿಲ್ಲ. ಇದರಿಂದ ಭಾರೀ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.