

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಇಂದು ಪ್ರದಾನ ಮಾಡಲಾಯಿತು.
ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ ಎಂದ ಮಹಾನ್ ಸಮಾಜ ಸುಧಾರಕ, ಚಿಂತಕ ಮತ್ತು ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಇಂದು ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಇದು ನನಗೆ ಸ್ಮರಣೀಯ ಕ್ಷಣವಾಗಿದೆ ಎಂದರು. ಭಾರತದ ಸ್ವಾತಂತ್ರ್ಯದಲ್ಲಿ ಲೋಕಮಾನ್ಯ ತಿಲಕರ ಪಾತ್ರ ಹಾಗೂ ಅವರ ಕೊಡುಗೆಯನ್ನು ಕೇವಲ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ತಿಲಕ್ ಅವರನ್ನು ಸ್ಮರಿಸಿದರು.
ನಾನು ಬಹುಮಾನದ ಹಣವನ್ನು ನಮಾಮಿ ಗಂಗೆ ಯೋಜನೆಗೆ ನೀಡಲು ನಿರ್ಧರಿಸಿದ್ದೇನೆ. ಈ ಪ್ರಶಸ್ತಿಯನ್ನು ದೇಶದ 140 ಕೋಟಿ ಜನರಿಗೆ ಅರ್ಪಿಸಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ಲೋಕಮಾನ್ಯ ತಿಲಕರ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪ ನಮನ ಸಲ್ಲಿಸಿದರು. ಅಲ್ಲದೆ, ಕಾರ್ಯಕ್ರಮ ಆರಂಭಕ್ಕೂ ಮುನ್ನ ಪುಣೆಯ ಶ್ರೀಮಂತ್ ದಗ್ದುಶೇತ್ ಹಲ್ವಾಯಿ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರಶಸ್ತಿ ಪ್ರಧಾನಿ ಕಾರ್ಯಕ್ರಮದಲ್ಲಿ ಎನ್ಸಿಪಿ ಪಕ್ಷದ ಮುಖ್ಯಸ್ಥ ಶರಾದ್ ಪವರ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. (ಏಜೆನ್ಸೀಸ್)