

ಮುಂಬೈ: ಮುಂಬರವ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಮಹಾರಾಷ್ಟ್ರದಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸೀಟು ಹಂಚಿಕೆ ಒಪ್ಪಂದದ ಪ್ರಕಾರ 48 ಲೋಕಸಭೆ ಕ್ಷೇತ್ರಗಳ ಪೈಕಿ ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 20, ಕಾಂಗ್ರೆಸ್ 18 ಹಾಗೂ ಶರದ್ ಪವಾರ್ ಬಣದ ಎನ್‌ಸಿಪಿ (10) ಸ್ಥಾನಗಳಲ್ಲಿ ಸ್ಫರ್ಧಿಸಲಿದೆ ಎಂದು ತಿಳಿದು ಬಂದಿದೆ.
ಈ ಹಿಂದೆ ಐದು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದ್ದ ವಂಚಿತ್ ಬಹುಜನ್ ಅಘಾಡಿ, ಉದ್ಧವ್ ಶಿವ ಸೇನೆ ಬಣದ ಪಾಲಿನಿಂದ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಹಾಗೂ ಪವಾರ್ ನೇತೃತ್ವದ ಎನ್‌ಸಿಪಿ ಬೆಂಬಲದೊಂದಿಗೆ ರಾಜು ಶೆಟ್ಟಿ ಎಂಬವರು ಸ್ವತಂತ್ರ ಅಭ್ಯರ್ಥಿಯಾಗಲಿದ್ದಾರೆಂದು ತಿಳಿದು ಬಂದಿದೆ. ಮುಂಬೈನ 6 ಕ್ಷೇತ್ರಗಳಲ್ಲಿ 4ರಲ್ಲಿ ಶಿವಸೇನೆ ಹಾಗೂ 1ರಲ್ಲಿ ವಿಬಿಎ ಸ್ಪರ್ಧಿಸುವ ಸಾಧ್ಯತೆ ಇದೆ.
2019ರಲ್ಲಿ ಬಿಜೆಪಿ ಜೊತೆ ಸ್ಪರ್ಧಿಸಿದ್ದ ಶಿವಸೇನೆ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 18ರಲ್ಲಿ ಜಯ ಸಾಧಿಸಿತ್ತು. ಮುಂಬೈ ಸೌತ್ ಸೆಂಟ್ರಲ್ ಹಾಗೂ ನಾರ್ತ್ವೆಸ್ಟ್ ಎರಡರಲ್ಲೂ ಗೆಲುವು ಸಾಧಿಸಿತ್ತು. ಆದರೆ ಈಗ ಬಹುಪಾಲು ಗೆದ್ದ ಸಂಸದರು ಶಿಂಧೆ ಬಣದಲ್ಲಿದ್ದಾರೆ. ಇನ್ನು ಕಾಂಗ್ರೆಸ್ 25 ಕ್ಷೇತ್ರದಲ್ಲಿ ಸ್ಪರ್ಧಿಸಿ ಒಂದರಲ್ಲಿ ಗೆದ್ದರೆ, ಶರದ್ ಪವಾರ್ ಎನ್‌ಸಿಪಿ 19ರಲ್ಲಿ ಸ್ಪರ್ಧಿಸಿ 4ರಲ್ಲಿ ಗೆದ್ದಿದೆ ಈಗ ಎನ್‌ಸಿಪಿ ಕೂಡ 2 ಬಣವಾಗಿದೆ.