ಕೂಸು ಹುಟ್ಟೋಕೂ ಮೊದಲೇ ಮಾರಾಟಕ್ಕೆ ಸ್ಕೆಚ್​- ಫೇಸ್​ಬುಕ್​ನಲ್ಲಿ ಜಾಹೀರಾತು ಪ್ರಕಟಿಸಿದಾತ ಅರೆಸ್ಟ್​

baby 20 APR 20
Published on

ಔರಂಗಾಬಾದ್​: ಮಗು ಹುಟ್ಟುವ ಮೊದಲೇ ಅದನ್ನು ಮಾರಾಟ ಮಾಡುವುದಕ್ಕಾಗಿ ಫೇಸ್​ಬುಕ್​​ನಲ್ಲಿ ಜಾಹೀರಾತು ಪ್ರಕಟಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನಾದಿನಿಗೆ ಇನ್ನಷ್ಟೇ ಹುಟ್ಟಬೇಕಾಗಿದ್ದ ಮಗುವನ್ನು ಆತ ಮಾರಾಟ ಮಾಡಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಶಿವಶಂಕರ್ ಟಾಂಗಡೆ (30) ಎಂದು ಗುರುತಿಸಲಾಗಿದೆ. ಆತ ರಂಜನ್​ಗಾಂವ್ ಶೇನ್​ಪುಂಜಿ ಪ್ರದೇಶದ ನಿವಾಸಿ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಬಹಿರಂಗವಾದ ವಿಚಾರ ಇಷ್ಟು. ಮಹಿಳೆ ಸದ್ಯ ಏಳು ತಿಂಗಳ ಗರ್ಭಿಣಿ. ಕೆಲವು ತಿಂಗಳ ಹಿಂದೆ ಪತಿ ಆಕೆಯಿಂದ ದೂರವಾಗಿದ್ದ. ಆಕೆ ಮರುಮದುವೆಗೆ ಹುಟ್ಟಲಿರುವ ಮಗು ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ಫೇಸ್​ಬುಕ್ ಜಾಹೀರಾತು ಪ್ರಕಟಿಸಿದ್ದ. ಇದಕ್ಕೆ ಆಕೆಯ ಒಪ್ಪಿಗೆಯೂ ಇತ್ತು.

ಫೇಸ್​ಬುಕ್​ನಲ್ಲಿ ಪ್ರಕಟಿಸಿದ ಜಾಹೀರಾತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೆ ಬಂದಿತ್ತು. ಅವರು ಕೂಡಲೇ ಪೊಲೀಸರ ಗಮನಕ್ಕೆ ಈ ವಿಷಯ ತಂದಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಡೀಲ್​ ನಡೆಸುವವರ ರೀತಿ ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ. ಬಾಲಾಪರಾಧ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net