

ಮುಂಬೈ: ಮಹಾಮಾರಿ ಕರೊನಾ ವೈರಸ್ ಅಟ್ಟಹಾಸ ದಿನೇದಿನೆ ಹೆಚ್ಚುತ್ತಿದೆ. ಇದನ್ನು ತಡೆಯಲು ಈಗಾಗಲೇ ಲಾಕ್ಡೌನ್ನಂತಹ ಕ್ರಮಗಳನ್ನು ತೆಗೆದುಕೊಂಡಿದ್ದರೂ ದೇಶದ ಆರ್ಥಿಕ ಸ್ಥಿತಿಗಾಗಿ ಸಡಿಲಗೊಳಿಸಲಾಗುತ್ತಿದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಲಾಕ್ಡೌನ್ ತೆಗೆದಿದ್ದರೆ, ಮಹಾರಾಷ್ಟ್ರ ಆಗಸ್ಟ್ 31ರವರೆಗೂ ಲಾಕ್ಡೌನ್ ವಿಸ್ತರಿಸಿದೆ.
ಮಹಾರಾಷ್ಟ್ರದಲ್ಲಿ ಈಗಾಗಲೇ 4 ಲಕ್ಷ ಕರೊನಾ ಪ್ರಕರಣಗಳು ದಾಟಿವೆ. ಹೀಗಾಗಿ ಕರೊನಾಗೆ ಕಡಿವಾಣ ಹಾಕಲು ಲಾಕ್ಡೌನ್ ಮುಂದುವರಿಸಿದೆ. ಕಳೆದ ತಿಂಗಳು ಜುಲೈ 31ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿತ್ತು. ಮತ್ತೆ ವಿಸ್ತರಣೆ ಮಾಡಿದ್ದು, ಆಗಸ್ಟ್ 5ರಿಂದ ಜಾರಿಗೆ ಬರಲಿದೆ.
ನೋಟಿಫಿಕೇಶನ್ ಪ್ರಕಾರ ಶಾಪಿಂಗ್ ಹಾಗೂ ವಾಯುವಿಹಾರ ಸೇರಿದಂತೆ ಅಗತ್ಯವಲ್ಲದ ಚಟುವಟಿಕೆಗಳಿಗೆ ಯಾರು ಸಹ ಮನೆಯಿಂದ ಹೊರಬರಬಾರದು ಎಂದು ನಿರ್ಬಂಧಿಸಲಾಗಿದೆ. ಅಲ್ಲದೆ, ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಡ್ಡಾಯ ಎಂದಿರುವ ಸರ್ಕಾರ ನಿರ್ಲಕ್ಷಿದರೆ ಬೆಲೆತೆರಬೇಕಾದೀತು ಎಂದು ಎಚ್ಚರಿಸಿದೆ.
ವೈದ್ಯಕೀಯ ಕಾರಣ ಹಾಗೂ ಉದ್ಯೋಗ ಚಟುವಟಿಕೆಗೆ ಮಾತ್ರ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಜನಸಮೂಹ ಸೇರುವುದು ಮತ್ತು ಸಭೆಗಳನ್ನ ಮುಂದಿನ ಆದೇಶದವರೆಗೆ ಸಂಪೂರ್ಣ ಬ್ಯಾನ್ ಮಾಡಲಾಗಿದೆ. ಇನ್ನು ಮದುವೆ ಸಮಾರಂಭಗಳಲ್ಲಿ 50 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಂತ್ಯಕ್ರಿಯೆಯಲ್ಲಿ 20 ಮಂದಿ ಮಾತ್ರ ಭಾಗವಹಿಸಬಹುದಾಗಿದೆ.
ಮಾಲ್ಗಳಲ್ಲಿನ ಆಹಾರ ಮಳಿಗೆ ಮತ್ತು ರೆಸ್ಟೋರೆಂಟ್ಗಳನ್ನು ತೆರಯಲು ಅನುಮತಿ ನೀಡಲಾಗಿದ್ದು, ಪಾರ್ಸಲ್ ಮತ್ತು ಡಿಲಿವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ತಂಡವಲ್ಲದ ಆಟಗಳಾದ ಟೆನ್ನಿಸ್, ಗಾಲ್ಫ್, ಜಿಮ್ನಾಸ್ಟಿಕ್ಸ್ ಹಾಗೂ ಬ್ಯಾಡ್ಮಿಂಟನ್ಗೆ ಅನುಮತಿ ನೀಡಲಾಗಿದ್ದು, ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಈಜುಕೊಳಗಳನ್ನು ತೆರೆಯುವಂತಿಲ್ಲ. ಪ್ರಯಾಣ ಮಾಡುವಾಗ ಮಾಸ್ಕ್ ಕಡ್ಡಾಯ ಎಂದು ಸರ್ಕಾರ ಹೇಳಿದೆ. ಇನ್ನು ಚಿತ್ರಮಂದಿರಗಳಿಗೆ ಇನ್ನು ಅನುಮತಿಯನ್ನು ನೀಡಿಲ್ಲ. (ಏಜೆನ್ಸೀಸ್)