

ಮುಂಬೈ: ರಾಜ್ಯದ ಎಲ್ಲ ಕಾಲೇಜುಗಳಲ್ಲಿಯೂ ಫೆ. 19ರಿಂದ ರಾಷ್ಟ್ರಗೀತೆ ಹಾಡುವುದನ್ನು ಮಹಾರಾಷ್ಟ್ರ ಸರ್ಕಾರ ಕಡ್ಡಾಯಗೊಳಿಸಿ ಬುಧವಾರ ಸುತ್ತೋಲೆ ಹೊರಡಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ-ಕಾಂಗ್ರೆಸ್-ಎನ್ಸಿಪಿ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್, ಫೆ. 19ರಿಂದ ಎಲ್ಲ ಕಾಲೇಜುಗಳಲ್ಲಿಯೂ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು ಎಂದು ಹೇಳಿದರು.
ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಪ್ಲೇ ಮಾಡುವಂತೆಯೇ ಕಾಲೇಜು ಮತ್ತು ವಿಶ್ವವಿದ್ಯಾಲಯದ ಸಾರ್ವಜನಿಕ ಸಮಾರಂಭಗಳಲ್ಲಿಯೂ ಇದನ್ನು ಅಳವಡಿಸಿಕೊಳ್ಳಿ ಎಂದು ಕಳೆದ ಜನವರಿಯಲ್ಲೇ ಸಮಂತ್ ಅವರು ನಿರ್ದೇಶಿಸಿದ್ದರು.
ರಾಷ್ಟ್ರಗೀತೆಯನ್ನು ಪ್ಲೇ ಮಾಡುವುದರಿಂದ ಮತ್ತು ಹಾಡುವುದರಿಂದ ಯುವ ಜನಾಂಗದಲ್ಲಿ ರಾಷ್ಟ್ರದ ಮೇಲೆ ಮತ್ತಷ್ಟು ಹೆಮ್ಮೆಯ ಭಾವನೆ ಮೂಡುತ್ತದೆ. ಇದಲ್ಲದೆ, ಭಾರತ ಸ್ವಾತಂತ್ರ್ಯದ ಮಹತ್ವದ ಬಗ್ಗೆಯೂ ಬೋಧಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು. (ಏಜೆನ್ಸೀಸ್)