

ಮುಂಬೈ: ಕರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮೇ 31ರವರೆಗೂ ಲಾಕ್ಡೌನ್ ವಿಸ್ತರಣೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಇಂದಿಗೆ 3ನೇ ಹಂತದ ಲಾಕ್ಡೌನ್ ಮುಕ್ತಾಯಗೊಳ್ಳಲಿದೆ. ಆದರೆ, ರಾಜ್ಯದಲ್ಲಿ ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ಮಹಾ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇನ್ನೊಂದೆಡೆ ಇಂದು ಸಂಜೆ ವೇಳೆಗೆ ಸರ್ಕಾರ 4ನೇ ಹಂತದ ಲಾಕ್ಡೌನ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಿದೆ.
ಮಹಾರಾಷ್ಟ್ರದಲ್ಲಿ ಇಡೀ ರಾಜ್ಯಕ್ಕೆ ಲಾಕ್ಡೌನ್ ವಿಸ್ತರಣೆ ಮಾಡಿದ್ದು, ಹಂತ ಹಂತವಾಗಿ ಲಾಕ್ಡೌನ್ನಲ್ಲಿ ರಿಯಾಯಿತಿ ನೀಡುವ ಬಗ್ಗೆ ಆದಷ್ಟು ಬೇಗ ತಿಳಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಜಯ್ ಮೆಹ್ತಾ ಹೇಳಿದ್ದಾರೆ.
ದೇಶದ ಒಟ್ಟಾರೆ ಕೋವಿಡ್ - 19 ಪ್ರಕರಣಗಳ ಮೂರನೇ ಒಂದು ಭಾಗ ಮಹಾರಾಷ್ಟ್ರದಲ್ಲಿ ದಾಖಲಾಗಿವೆ. 30 ಸಾವಿರ ಗಡಿ ದಾಟಿದ್ದು, ಶನಿವಾರ ಒಂದೇ ದಿನ 1606 ಪ್ರಕರಣಗಳು ವರದಿಯಾಗಿವೆ. ಅದರಲ್ಲೂ ಮುಂಬೈ ತೀವ್ರತರವಾದ ಪರಿಣಾಮ ಎದುರಿಸುತ್ತಿದ್ದು, 884 ಕೇಸ್ಗಳೊಂದಿಗೆ ಶನಿವಾರ 18,555 ಪ್ರಕರಣಗಳಿಗೆ ಜಿಗಿದಿದೆ.
ಮೇ ಅಂತ್ಯದ ವೇಳೆಗೆ ಮುಂಬೈನಲ್ಲಿ ಹೆಚ್ಚಿನ ಪ್ರಕರಣಗಳು ಸೇರಿದಂತೆ ಮಹಾರಾಷ್ಟ್ರ ಒಂದರಲ್ಲೇ 50 ಸಾವಿರ ಪ್ರಕರಣಗಳು ದಾಖಲಾಗುವ ಅಂದಾಜಿದೆ. ಇದರ ನಡುವೆ ಸರ್ಕಾರ ಕೇಂದ್ರ ಸರ್ಕಾರದ ಬಳಿ ವಿಶೇಷ ಆರ್ಥಿಕ ಪ್ಯಾಕೇಜ್ಗೆ ಒತ್ತಾಯಿಸಿದೆ. (ಏಜೆನ್ಸೀಸ್)