

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ(Maharashtra Elections) ಚುನಾವಣೆ ವೇಳೆ ಶಾಸಕರನ್ನು ಸೆಳೆಯಲು ಕೋಟ್ಯಂತರ ರೂಪಾಯಿ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರಲು ತಮ್ಮ ಪಕ್ಷದ ಇಬ್ಬರು ಶಾಸಕರಿಗೆ ಕೋಟ್ಯಂತರ ರೂಪಾಯಿ ಆಫರ್ ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನೆತಾಲ ಈ ಆರೋಪ ಮಾಡಿದ್ದು, ಇದೊಂದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಇದು ಪಕ್ಷಾಂತರ ಕಾಯ್ದೆಯಡಿ ಬರುತ್ತದೆ. ಗೃಹ ಖಾತೆಯ ಉಸ್ತುವಾರಿ ಹೊತ್ತಿರುವ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಬಗ್ಗೆ ಏಕೆ ಮೌನವಾಗಿದ್ದಾರೆ? ಅದು ಅವರ ಜವಾಬ್ದಾರಿಯಾಗಿದೆ. ನಿಜವಾಗಿ ಏನಾಯಿತು ಎಂದು ಹೇಳಬೇಕು ಎಂದು ಚೆನ್ನಿತಾಲ ಒತ್ತಾಯಿಸಿದ್ದಾರೆ.
ಚೆನ್ನಿತಾಲ ಆರೋಪಕ್ಕೆ ಅಜಿತ್ ಪವಾರ್ ಅವರ ಎನ್‌ಸಿಪಿ ಇನ್ನೂ ಪ್ರತಿಕ್ರಿಯಿಸಿಲ್ಲ.
ಮಹಾರಾಷ್ಟ್ರದಲ್ಲಿ ಬಿಜೆಪಿ, ಏಕನಾಥ್ ಶಿಂಧೆ ಅವರ ಶಿವಸೇನೆ, ಅಜಿತ್ ಪವಾರ್ ಅವರ ಎನ್‌ಸಿಪಿಯ 'ಮಹಾಯುತಿ ಮೈತ್ರಿ' ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ, ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ 'ಮಹಾ ವಿಕಾಸ್ ಅಘಾಡಿ' ಮೈತ್ರಿ ನಡುವೆ ಪ್ರಮುಖ ಸ್ಪರ್ಧೆಯಿದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಒಂದೇ ಹಂತದಲ್ಲಿ ನ.20 ರಂದು ಮತದಾನ ನಡೆಯಲಿದ್ದು, ನ.23 ರಂದು ಫಲಿತಾಂಶ ಪ್ರಕಟವಾಗಲಿದೆ.