

ಮುಂಬೈ: ನವೆಂಬರ್ 20ರಂದು ವಿಧಾನಸಭೆಗೆ ಮತದಾನ ನಡೆಯಲಿರುವ ಮಹಾರಾಷ್ಟ್ರದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಮತಬೇಟೆಯಲ್ಲಿ ತೊಡಗಿವೆ. ಇನ್ನೂ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷದ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಸಹಜ. ಈ ರೀತಿಯ ಹೇಳಿಕೆಗಳು ಕೆಲವೊಮ್ಮ ರಾಷ್ಟ್ರ ರಾಜಕಾರಣದಲ್ಲೂ ಸದ್ದು ಮಾಡಿವೆ. ಅದೇ ರೀತಿ ಇದೀಗ ಕಾಂಗ್ರೆಸ್ನ ಮಾಜಿ ಶಾಸಕರೊಬ್ಬರು ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ನಾಗ್ಪುರ ಜಿಲ್ಲೆಯ ಸಾವೊನೆರ್ ಕ್ಷೇತ್ರದ ಸಿಲೆವಾಡಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಸುನೀಲ್ ಕೇದಾರ್ ಜನರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಕಾಂಗ್ರೆಸ್ನ ಮಾಜಿ ಶಾಸಕ ಸುನೀಲ್ ಕಾರ್ಯಕ್ರಮ ಒಂದರಲ್ಲಿ ಮಾತನಾಡುವ ವೇಳೆ ಇನ್ಮುಂದೆ ಸಿಲೆವಾಡಿ ಗ್ರಾಮದ ಯಾವುದಾದರು ಮನೆಯ ಮೇಲೆ ಬಿಜೆಪಿ (BJP) ಧ್ವಜವನ್ನು ನೋಡಿದರೆ ಅಂತಹವರನ್ನು ಮನೆಯಿಂದ ಹೊರಗೆ ಎಳೆ ತಂದು ಹೊಡೆಯುತ್ತೇವೆ. ಹಾಗಾಗಬಾರದೆಂದರೆ ನಿಮ್ಮ ಮನೆಯ ಮೇಲೆ ಬಿಜೆಪಿ ಧ್ವಜಗಳನ್ನು ಹಾರಿಸಬೇಡಿ ಎಂದು ಹೇಳಿದ್ದಾರೆ.
ಈ ವಿಡಿಯೋ 2019ರಲ್ಲಿ ಚಿತ್ರೀಕರಿಸಲಾಗಿದ್ದು, ರಾಜ್ಯ ವಿಧಾನಸಭೆ ಚುನಾವಣೆ ಸಮಯದಲ್ಲಿ ವೈರಲ್ ಆಗುತ್ತಿದೆ. ನಾಗ್ಪುರ ಜಿಲ್ಲಾ ಸಹಕಾರಿ ಬ್ಯಾಂಕ್‌ಗೆ ಸಂಬಂಧಿಸಿದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಸುನೀಲ್ ಕೇದಾರ್ ಅವರಿಗೆ ಚುನಾವಣೆಯಲ್ಲಿ ಆರು ವರ್ಷಗಳ ಕಾಲ ಸ್ಫರ್ಧಿಸದಂತೆ 2023ರ ಡಿಸೆಂಬರ್ನಲ್ಲಿ ಶಿಕ್ಷೆ ವಿಧಿಸಿತ್ತು.