

ಪುಣೆ: ಮಹಾರಾಷ್ಟ್ರದ ಯುವ ವೈದ್ಯೆ (Maharashtra Doctor ) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬಾದ್ನೆ ಎಂಬುವರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಡೆತ್ನೋಟ್ನಲ್ಲಿ ಬಾದ್ನೆ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಶನಿವಾರ (ಅ.25) ಸಂಜೆ ಗೋಪಾಲ್ನನ್ನು ಅರೆಸ್ಟ್ ಮಾಡಲಾಯಿತು.
ಮೃತ ವೈದ್ಯೆ ಸಾವಿಗೆ ಶರಣಾಗುವ ಮುನ್ನ ಬರೆದಿಟ್ಟ ಡೆತ್ನೋಟ್ ಸದ್ಯ ಭಾರಿ ಸಂಚಲನ ಮೂಡಿಸಿದೆ. ವೈದ್ಯೆ, ತನ್ನ ಮೇಲೆ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಐದು ತಿಂಗಳಲ್ಲಿ ನಾಲ್ಕು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಪ್ರಸ್ತುತ ಕೇಸ್ ದಾಖಲಾಗಿದ್ದೇ ಆದರೂ ಯುವತಿಯ ಕುಟುಂಬಸ್ಥರು ಹಲವು ಆರೋಪಿಗಳನ್ನು ಎಸಗಿದ್ದಾರೆ. ಅಧಿಕಾರಿಗಳ ಲೋಪಗಳು ಮತ್ತು ಪ್ರಕರಣವನ್ನು ಮುಚ್ಚಿಹಾಕಲು ನಾನಾ ರೀತಿಯಲ್ಲಿ ಕಸರತ್ತು ನಡೆಸುತ್ತಿರುವ ಬಗ್ಗೆ ದೂರಿದ್ದಾರೆ. ಫಾಲ್ಟನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದ ವೈದ್ಯರೊಬ್ಬರು, ಕಳೆದ ವಾರ ಹೋಟೆಲ್ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಅಂದಹಾಗೆ, ಮೃತ ಯುವ ವೈದ್ಯೆ ಮಧ್ಯ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಬೀಡ್ ಜಿಲ್ಲೆಯ ನಿವಾಸಿ. ಆಕೆ, ಸತಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗುರುವಾರ (ಅ.23) ರಾತ್ರಿ ಫಾಲ್ಟನ್ ಪಟ್ಟಣದ ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವೈದ್ಯೆಯ ಶವ ಪತ್ತೆಯಾಯಿತು. ತನ್ನ ಎಡ ಅಂಗೈಯಲ್ಲಿ ಡೆತ್ನೋಟ್ ಬರೆದಿದ್ದ ಸಂತ್ರಸ್ತೆ, ಎಸ್ಐ ಗೋಪಾಲ್ ಬಾದ್ನೆ ಎಂಬುವರ ವಿರುದ್ಧ ದೈಹಿಕ ಮತ್ತು ಮಾನಸಿಕ ಕಿರುಕುಳ ಆರೋಪ ಮಾಡಿದ್ದಾರೆ. ಅಲ್ಲದೆ, ಆತನ ನಿರಂತರ ಕಿರುಕುಳದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಎಸ್ಐ ಬಾದ್ನೆಯನ್ನು ಕರ್ತವ್ಯದಿಂದ ಅಮಾನತುಗೊಳಿಸುವುದರ ಜತೆಗೆ ಬಂಧಿಸಲಾಗಿದೆ.
ಪೊಲೀಸ್ ಅಧಿಕಾರಿಯೊಂದಿಗೆ ಯುವತಿಯ ಮನೆ ಮಾಲೀಕರ ಪುತ್ರ ಪುಣೆಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪ್ರಶಾಂತ್ ಬಂಕರ್ ಕೂಡ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾಗಿ ಮೃತ ವೈದ್ಯೆ ತನ್ನ ಡೆತ್ನೋಟ್ನಲ್ಲಿ ಹೆಸರಿಸಿದ್ದಾರೆ. ಸದ್ಯ ಈತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.
ಮೃತ ವೈದ್ಯೆಯ ಸಹೋದರ ಮಾತನಾಡಿ, ಬೆಳಗ್ಗೆ 6 ಗಂಟೆಯವರೆಗೂ ಯಾರೊಬ್ಬರು ಸಹ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ, ಕುಟುಂಬಸ್ಥರ ಉಪಸ್ಥಿತಿ ಇಲ್ಲದೆಯೇ, ಆಕೆಯ ಮೃತದೇಹವನ್ನು ಮನೆಯಿಂದ ಆಸ್ಪತ್ರೆಗೆ ತಂದಿದ್ದಾರೆ. ಇದೆಲ್ಲವೂ ಕುಟುಂಬಸ್ಥರ ಮುಂದೆಯೇ ನಡೆಯಬೇಕಾದ ಪ್ರಕ್ರಿಯೆಗಳು. ಯಾಕಿಲ್ಲಿ ಲೋಪದೋಷಗಳು ಕಂಡುಬಂದಿವೆ ಎಂದು ಪ್ರಶ್ನಿಸಿದ್ದಾರೆ.
ಇದರೊಟ್ಟಿಗೆ ಮತ್ತೊಂದು ಡೆತ್ನೋಟ್ ಇದೆ ಎಂಬುದು ನಮ್ಮ ಅನುಮಾನ ಎಂದು ವೈದ್ಯೆಯ ಸಹೋದರ ಹೇಳಿದ್ದಾರೆ. ಅವಳು ಭಾರೀ ನೋವಿನಲ್ಲಿ ನಾಲ್ಕು ಪುಟಗಳ ದೂರನ್ನು ಬರೆದಿದ್ದಾಳೆ. ಕೇವಲ ಹಸ್ತದ ಮೇಲೆ ಸಣ್ಣ ನೋಟ್ ಬರೆದಿಡಲು ಸಾಧ್ಯವೇ ಇಲ್ಲ. ಈ ಕೇಸ್ಗೆ ಇನ್ನೊಂದು ಪತ್ರ ಹುಡುಕಿದರೆ, ತನಿಖೆಗೆ ಸಹಾಯವಾಗುತ್ತದೆ ಎಂದು ಆಗ್ರಹಿಸಿದ್ದಾರೆ.
ಸಂತ್ರಸ್ತಳ ಸಂಬಂಧಿಕರು ಆಕೆಯ ಸಾವಿನ ಬಗ್ಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮುಂದಾಳತ್ವ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ನಿಷ್ಪಕ್ಷಪಾತತೆಯನ್ನು ಖಚಿತಪಡಿಸಿಕೊಳ್ಳಲು ಮಹಾರಾಷ್ಟ್ರಕ್ಕೆ ಸೇರದ ಮಹಿಳಾ ಅಧಿಕಾರಿಯೊಬ್ಬರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮೃತ ವೈದ್ಯೆ ಡೆತ್ನೋಟ್ನಲ್ಲಿ ಉಲ್ಲೇಖಿಸಿದ ಇಬ್ಬರನ್ನು ಇದೀಗ ಪೊಲೀಸರು ಬಂಧಿಸಿದ್ದು, ಸಬ್ ಇನ್ಸ್‌ಪೆಕ್ಟರ್ ಗೋಪಾಲ್ ಬದಾನೆ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್ನನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅ.30 ರವರೆಗೆ ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ,(ಏಜೆನ್ಸೀಸ್).